October 3, 2026
Saturday, October 3, 2026
spot_img

ಮೈಸೂರಿನಲ್ಲಿ ಯುವ ದಸರಾ ಸಡಗರ: ಅ.13ರಿಂದ 17ರವರೆಗೆ ತಾರಾ ಕಲಾವಿದರ ಭರ್ಜರಿ ಕಾರ್ಯಕ್ರಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಡಹಬ್ಬ ದಸರಾಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ದಸರಾದಲ್ಲಿ ಸಾಕಷ್ಟು ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಅ.13ರಿಂದ 17ರವರೆಗೆ ಜ್ವಾಲಾಮುಖಿ ತ್ರಿಪುರಸುಂದರ ದೇವಾಲಯದ ಬಳಿಯ ರಿಂಗ್‌ ರೋಡ್‌ನಲ್ಲಿ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಡೀ ದೇಶದ ಸಿನಿಮಾ ಇಂಡಸ್ಟ್ರಿಯ ಕಲಾವಿದರು ಆಗಮಿಸಿ ಕನ್ನಡದ ಜನತೆಗೆ ಮನರಂಜನೆ ನೀಡಲಿದ್ದಾರೆ.

ಯಾವೆಲ್ಲಾ ಕಾರ್ಯಕ್ರಮಗಳಿವೆ? ಯಾವ ಸೆಲೆಬ್ರಿಟಿಗಳು ಬಾಗಿಯಾಗಲಿದ್ದಾರೆ?

ಅಕ್ಟೋಬರ್‌ 13ರ ಸಂಜೆ ನಟ, ಡ್ಯಾನ್ಸರ್‌, ನಿರ್ದೇಶಕ ಪ್ರಭುದೇವ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ಇದೇ ದಿನ ಅಜನೀಶ್‌ ಲೋಕನಾಥ್‌ ಅವರ ತಂಡದಿಂದ ಸಂಗೀತ ರಸದೌತಣ ಕಾರ್ಯಕ್ರಮ ಇರಲಿದೆ. ನಕಾಜ್‌ ಅಜೀಜ್‌, ವಾಸುಕಿ ವೈಭವ್‌, ಅನನ್ಯಾ ಭಟ್‌, ಮಂಗ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅಕ್ಟೋಬರ್‌ 14 ರಂದು ಬಾಲಿವುಡ್‌ನ ಪ್ರಮುಖ ಗಾಯಕರಾದ ಶಂಕರ್‌-ಎಹಸಾನ್‌- ಲಾಯ್‌ ತಂಡ ಪರ್ಫಾರ್ಮ್‌ ಮಾಡಲಿದೆ.

ಅಕ್ಟೋಬರ್‌ 15 ರಂದು ಕನ್ನಡ, ತೆಲುಗು ಹಾಗೂ ಹಿಂದಿ ಹಾಡುಗಳನ್ನು ಹಾಡಿ ಜನರ ಮನಸ್ಸಿನಲ್ಲಿ ಖಾಯಂ ಸ್ಥಾನ ಪಡೆದಿರುವ ಸಿದ್‌ ಶ್ರೀರಾಮ್‌ ಆಗಮಿಸಲಿದ್ದಾರೆ.

ಅಕ್ಟೋಬರ್ 16 ರಂದು ಸಂಪೂರ್ಣ ಸೌತ್‌ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ನಟ ಶಿವರಾಜ್‌ಕುಮಾರ್‌, ನಟಿ ರಚಿತಾ ರಾಮ್‌, ವಿಜಯ್‌ ಪ್ರಕಾಶ್‌, ರಾಜೇಶ್‌ ಕೃಷ್ಣನ್‌, ಚಂದನ್‌ ಶೆಟ್ಟಿ, ಅನುರಾಧಾ ಭಟ್‌ ಆಗಮಿಸಲಿದ್ದಾರೆ.

ಇನ್ನು ಯುವ ದಸರಾದ ಕಡೆಯ ದಿನವಾದ ಅಕ್ಟೋಬರ್ 17 ರಂದು ಬಾಲಿವುಡ್‌ ಗಾಯಕಿ ಜಾಸ್ಮಿನ್‌ ಸ್ಯಾಂಡ್ಲಾಸ್‌ ಆಗಮಿಸಲಿದ್ದಾರೆ.

ಗೋಲ್ಡ್‌ ಕಾರ್ಡ್‌ ಪಡೆದವರಿಗೆ ವಿಶೇಷ ಆಸನ

ಪ್ರತಿ ದಿನ ಸಂಜೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಯಾವುದೇ ಟಿಕೆಟ್‌ ಖರೀದಿ ಮಾಡಬೇಕಿಲ್ಲ. ವೇದಿಕೆಯ ಮುಂಭಾಗದ ವಿಶೇಷ ಆಸನಗಳಿಗಾಗಿ ವಿಐಪಿ ಪಾಸ್‌ ನೀಡಲಾಗುತ್ತದೆ. ಇದನ್ನು ಜಿಲ್ಲಾಡಳಿತ ಮತ್ತು ದಸರಾ ಸಮಿತಿ ಪ್ರಮುಖ ಗಣ್ಯರಿಗೆ ವಿತರಿಸಲಾಗುತ್ತದೆ. ಮೈಸೂರು ದಸರಾ ಗೋಲ್ಡ್‌ ಕಾರ್ಡ್‌ ಪಡೆದವರಿಗೆ ವಿಶೇಷ ಆಸನದ ವ್ಯವಸ್ಥೆ ಇರಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರುವ ಕಾರಣ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಒಂದು ಗಂಟೆ ಮುಂಚೆಯೇ ಸ್ಥಳಕ್ಕೆ ತೆರಳಿ ಕುಳಿತುಕೊಳ್ಳುವುದು ಸೂಕ್ತವಾಗಿದೆ.

Must Read