October 3, 2026
Saturday, October 3, 2026
spot_img

ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಹರಿದು ಬಂದ ಭಕ್ತಸಾಗರ: ಕೇಸರಿಮಯವಾದ ಚಿತ್ರದುರ್ಗ

ಹೊಸದಿಗಂತ ವರದಿ ಚಿತ್ರದುರ್ಗ: ​

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿ ಮೂರ್ತಿಯ ವಿಸರ್ಜನೆ ಅಂಗವಾಗಿ ಶನಿವಾರ ಅದ್ಧೂರಿ ಶೋಭಾಯಾತ್ರೆ ನಡೆಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಗೆ ಸಾವಿರಾರು ಭಕ್ತರು ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದು, ಹಲವು ಗಂಟೆಗಳ ಕಾಲ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಬೃಹತ್ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಮೂರ್ತಿಗೆ ಹೂವು, ಹಣ್ಣುಗಳಿಂದ ಅಲಂಕರಿಸಿದ ಬೃಹತ್ ಹಾರಗಳನ್ನು ಹಾಕಲಾಗಿತ್ತು. ಮಾರ್ಗದುದ್ದಕ್ಕೂ ಭಕ್ತರು ಗಣಪತಿಗೆ ಪುಷ್ಪವೃಷ್ಟಿ ಮಾಡಿ, ಪೂಜೆ ಸಲ್ಲಿಸಿದರು. ಕನಕ ವೃತ್ತದಲ್ಲಿ ದೀಪಾರತಿ ನೆರವೇರಿಸಿ ವಿಘ್ನೇಶ್ವರನಿಗೆ ಭಕ್ತಿಭಾವದಿಂದ ನಮನ ಸಲ್ಲಿಸಲಾಯಿತು.

ಇದನ್ನೂ ಓದಿ:

ಮೆರವಣಿಗೆಯಲ್ಲಿ ವಿವಿಧ ಮಹನೀಯರ ಚಿತ್ರಗಳು ಹಾಗೂ ಕೇಸರಿ ಧ್ವಜಗಳನ್ನು ಹೊಂದಿದ್ದ ವಾಹನಗಳು ಗಮನ ಸೆಳೆದವು. ಸಾವಿರಾರು ಯುವಕರು ಕೇಸರಿ ಪೇಟ ಧರಿಸಿ, ಕೈಯಲ್ಲಿ ಧ್ವಜಗಳನ್ನು ಹಿಡಿದು ಶೋಭಾಯಾತ್ರೆಯಲ್ಲಿ ಸಾಗಿದರು. ‘ಭಾರತಾಂಬೆಗೆ ಜೈ’, ‘ಜೈ ಶ್ರೀರಾಮ್’ ಸೇರಿದಂತೆ ವಿವಿಧ ಘೋಷಣೆಗಳು ಮೊಳಗಿದವು.

ಡೊಳ್ಳು, ಚಮಾಳ, ತಮಟೆ, ಚಂಡೆ, ಡ್ರಮ್ಸ್, ತಾಳ-ಮದ್ದಳೆ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯಗಳ ನಾದ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಸಂಗೀತದ ತಾಳಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆ ಮಾರ್ಗದಲ್ಲಿ ಸಾರ್ವಜನಿಕರಿಗೆ ನೀರು, ಮಜ್ಜಿಗೆ ಹಾಗೂ ಉಪಾಹಾರದ ವ್ಯವಸ್ಥೆಯನ್ನು ವಿವಿಧ ಸಂಘ-ಸಂಸ್ಥೆಗಳು ಮಾಡಿದ್ದವು.

ಶೋಭಾಯಾತ್ರೆ ಸಾಗಿದ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ರಸ್ತೆಗಳು ಜನರಿಂದ ತುಂಬಿ ತುಳುಕಿದವು. ಕೆಲ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಗಣಪತಿ ಮೂರ್ತಿಯನ್ನು ಅಂತಿಮವಾಗಿ ಚಂದ್ರವಳ್ಳಿ ಬಳಿ ವಿಸರ್ಜಿಸಲಾಯಿತು.

ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಭಕ್ತಿ, ಸಂಗೀತ ಮತ್ತು ಸಂಭ್ರಮದ ನಡುವೆ ನಡೆದ ವಿಸರ್ಜನಾ ಕಾರ್ಯಕ್ರಮದೊಂದಿಗೆ ಹಿಂದೂ ಮಹಾ ಗಣಪತಿ ಉತ್ಸವಕ್ಕೆ ತೆರೆ ಬಿದ್ದಿತು.

Must Read