ಹೊಸದಿಗಂತ ವರದಿ ಬೆಳಗಾವಿ :
ಮಾಜಿ ಪ್ರಿಯಕರನ ಜೊತೆ ಸೇರಿ ಹಾಲಿ ಪ್ರಿಯಕರನನ್ನು ಹತ್ಯೆ ಮಾಡಿಸಿರುವ ಆರೋಪ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಿಗೇರಿಯ ರಣವೀರಸಿಂಗ್ ರಜಪೂತ (32) ಹತ್ಯೆಗೀಡಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀದೇವಿ ರಜಪೂತ ಹಾಗೂ ವಿಜಯಪುರ ಜಿಲ್ಲೆಯ ರೋಣಿಹಾಳದ ಬೈರು ಪವಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಶ್ರೀದೇವಿ ಹಾಗೂ ರಣವೀರಸಿಂಗ್ ನಡುವೆ ಕಳೆದ ಐದಾರು ವರ್ಷಗಳಿಂದ ಸಂಬಂಧವಿತ್ತು. ಈ ನಡುವೆ ಶ್ರೀದೇವಿಯ ಪುತ್ರಿಯನ್ನು ರಣವೀರಸಿಂಗ್ ಅವರ ಸೋದರ ಸಂಬಂಧಿಗೆ ವಿವಾಹ ಮಾಡಿಕೊಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿತ್ತು. ಈ ಬೇಡಿಕೆಗೆ ಶ್ರೀದೇವಿ ಒಪ್ಪದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ.
ಮೂಲತಃ ರೋಣಿಹಾಳದವರಾದ ಶ್ರೀದೇವಿ, ಸುಮಾರು 20 ವರ್ಷಗಳ ಹಿಂದೆ ಬಳ್ಳಿಗೇರಿಯ ಯುವಕನನ್ನು ವಿವಾಹವಾಗಿದ್ದರು. ಶಾಲಾ ದಿನಗಳಿಂದಲೇ ಬೈರು ಪವಾರ್ ಹಾಗೂ ಶ್ರೀದೇವಿ ಪರಸ್ಪರ ಪರಿಚಿತರಾಗಿದ್ದರು ಎನ್ನಲಾಗಿದೆ. ರಣವೀರಸಿಂಗ್‌ನಿಂದ ಕಿರುಕುಳವಾಗುತ್ತಿದೆ ಎಂದು ಶ್ರೀದೇವಿ ಬೈರು ಪವಾರ್‌ಗೆ ತಿಳಿಸಿದ್ದು, ಬಳಿಕ ಇಬ್ಬರೂ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯೋಜನೆಯಂತೆ ಬಳ್ಳಿಗೇರಿಗೆ ಬಂದ ಬೈರು ಪವಾರ್, ರಣವೀರಸಿಂಗ್‌ನ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ತನಿಖೆ ನಡೆಸಿದ ಪೊಲೀಸರು ಕಾಲ್ ಡಿಟೇಲ್ಸ್ ಆಧರಿಸಿ ಇಬ್ಬರನ್ನು ಬಂಧಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



