ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಪ್ರಯೋಗಗಳ ಮೂಲಕವೇ ಛಾಪು ಮೂಡಿಸಿದ್ದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ಅವರು ಭಾನುವಾರ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಅವರು, ಭಾರತೀಯ ಚಿತ್ರರಂಗದ ದಶೆಯನ್ನು ಬದಲಾಯಿಸಿದ ಅಪರೂಪದ ತಂತ್ರಜ್ಞ.
ಸದಾ ಮ್ಯಾಜಿಕ್ ಮಾಡುತ್ತಿದ್ದ ಸಿಂಗೀತಂ
ಕೇವಲ ಸಾಂಪ್ರದಾಯಿಕ ಕಥೆಗಳಿಗೆ ಕಟ್ಟುಬೀಳದ ಸಿಂಗೀತಂ, ಬೆಳ್ಳಿತೆರೆಯ ಮೇಲೆ ಸದಾ ಮ್ಯಾಜಿಕ್ ಮಾಡುತ್ತಿದ್ದರು. ಮಾತುಗಳೇ ಇಲ್ಲದ ಕೇವಲ ಹಾವಭಾವಗಳ ಮೂಲಕವೇ ಇಡೀ ದೇಶವನ್ನು ಕಣ್ಣಿಕ್ಕಿಸುವಂತೆ ಮಾಡಿದ ಕಮಲ್ ಹಾಸನ್ ನಟನೆಯ ‘ಪುಷ್ಪಕ ವಿಮಾನ’ ಮೂಕಿ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು. ಇನ್ನು ತೆಲುಗಿನಲ್ಲಿ ಅವರು ನಿರ್ದೇಶಿಸಿದ ಸೈನ್ಸ್ ಫಿಕ್ಷನ್ ಕಥಾಹಂದರದ ‘ಆದಿತ್ಯ 369’ ಮತ್ತು ಜಾನಪದ ಶೈಲಿಯ ‘ಭೈರವ ದ್ವೀಪ’ ಚಿತ್ರಗಳು ಇಂದಿಗೂ ಸಿನಿಕಾಶಿಗಳ ಪಾಲಿಗೆ ಪಠ್ಯಪುಸ್ತಕಗಳಂತಿವೆ.
ಕನ್ನಡದ ನಂಟು ಮತ್ತು ಬಹುಮುಖ ಪ್ರತಿಭೆ
ಕನ್ನಡ ಚಿತ್ರರಂಗದೊಂದಿಗೂ ಇವರ ಒಡನಾಟ ಅತ್ಯಂತ ಆಳವಾಗಿತ್ತು. ಡಾ. ರಾಜ್ಕುಮಾರ್ ನಟನೆಯ ‘ಹಾಲು ಜೇನು’, ‘ದೇವತಾ ಮನುಷ್ಯ’ದಂತಹ ಸೂಪರ್ ಹಿಟ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದು ಇದೇ ಸಿಂಗೀತಂ. ನಟ ಶಿವರಾಜ್ಕುಮಾರ್ ಅವರ ಮೊದಲ ಸಿನಿಮಾ ‘ಆನಂದ್’ ಚಿತ್ರಕ್ಕೂ ಇವರೇ ನಿರ್ದೇಶಕರು. ಕೇವಲ ನಿರ್ದೇಶನಕ್ಕಷ್ಟೇ ಸೀಮಿತವಾಗದ ಇವರು ಅತ್ಯುತ್ತಮ ಕಥೆಗಾರ, ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. 1931 ಸೆಪ್ಟೆಂಬರ್ 21 ರಂದು ಜನಿಸಿದ ಇವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ಚಲನಚಿತ್ರಗಳನ್ನು ಭಾರತೀಯ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್ವುಡ್, ಕಾಲಿವುಡ್ ಹಾಗೂ ಟಾಲಿವುಡ್ನ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



