ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ನಟನೆಯ ‘ದೇವಾರ: ಪಾರ್ಟ್ 1’ ಚಿತ್ರದ ಸೂಪರ್ ಹಿಟ್ ‘ಚುಟ್ಟಮಲ್ಲೆ’ ಹಾಡಿನ ವಿಡಿಯೋವನ್ನು AI ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಮಾರ್ಫ್ ಮಾಡಿರುವುದಕ್ಕೆ ಮೆಗಾಸ್ಟಾರ್ ಚಿರಂಜೀವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕಂಡು ತೀವ್ರ ಅಸಮಾಧಾನ ಹೊರಹಾಕಿರುವ ಅವರು, ಇಂತಹ ಕೃತ್ಯಗಳನ್ನು ಎಸಗುವ ಮತ್ತು ಹರಡುವ ಕ್ರಿಮಿನಲ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದು ತಮಾಷೆಯಲ್ಲ, ಕ್ರೂರ ಅಪರಾಧ
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಿರಂಜೀವಿ, ‘ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಇಂತಹ ಮಾರ್ಫ್ ವಿಡಿಯೋಗಳನ್ನು ಸೃಷ್ಟಿಸುವುದು ಅತ್ಯಂತ ಕ್ರೂರ, ನಾಚಿಕೆಗೇಡಿನ ಕೃತ್ಯ. ಇದನ್ನು ಕೇವಲ ತಮಾಷೆ ಅಥವಾ ಮನರಂಜನೆ ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇಂದು ಇದು ಬೇರೆಯವರಿಗೆ ಸಂಭವಿಸಿದೆ, ನಾಳೆ ನಮಗೆ ಅಥವಾ ನಮ್ಮ ಆಪ್ತರಿಗೂ ಆಗಬಹುದು. ವೈಯಕ್ತಿಕವಾಗಿ ನಮಗೆ ತೊಂದರೆಯಾಗಿಲ್ಲ ಎಂದು ನಾವು ಮೌನವಾಗಿರಬಾರದು. ಡಿಜಿಟಲ್ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಗುಡುಗಿದ್ದಾರೆ.
ಫಿಲ್ಮ್ ಚೇಂಬರ್ ಕಮಿಟಿ ರಚನೆಗೆ ನಿರ್ಧಾರ
ಕೇವಲ ಆಕ್ರೋಶ ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಚಿತ್ರರಂಗದಲ್ಲಿ ಇಂತಹ ಸೈಬರ್ ಅಪರಾಧಗಳನ್ನು ತಡೆಯಲು ಮಹತ್ವದ ಹೆಜ್ಜೆಯಿಡಲು ಚಿರಂಜೀವಿ ನಿರ್ಧರಿಸಿದ್ದಾರೆ. ಈ ವಿಷಯವನ್ನು ತಾವೇ ಖುದ್ದಾಗಿ ತೆಲುಗು ಫಿಲ್ಮ್ ಚೇಂಬರ್ ಮತ್ತು ಪ್ರೊಡ್ಯೂಸರ್ಸ್ ಕೌನ್ಸಿಲ್ ಗಮನಕ್ಕೆ ತರಲಿದ್ದು, ಚಿತ್ರರಂಗದ ಗಣ್ಯರನ್ನು ಒಳಗೊಂಡ ಪ್ರತ್ಯೇಕ ‘ಬೆಂಬಲ ಸಮಿತಿ’ ರಚಿಸಲು ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ. ಈ ಸಮಿತಿಯು ಸೈಬರ್ ಕ್ರೈಮ್ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿ, ಇಂತಹ ವಿಡಿಯೋಗಳನ್ನು ಇಂಟರ್ನೆಟ್ನಿಂದ ತೆಗೆದುಹಾಕಲು ಮತ್ತು ಅಪರಾಧಿಗಳನ್ನು ಜೈಲಿಗಟ್ಟಲು ಕಾನೂನು ಹೋರಾಟ ನಡೆಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ಇದೇ ವೇಳೆ ಇಂತಹ ವಿಡಿಯೋಗಳನ್ನು ಯಾರೂ ವೀಕ್ಷಿಸಬಾರದು, ಡೌನ್ಲೋಡ್ ಮಾಡಬಾರದು ಅಥವಾ ಶೇರ್ ಮಾಡಬಾರದು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿರುವ ಮೆಗಾಸ್ಟಾರ್, ಸರ್ಕಾರಗಳು ಕೂಡ ಎಐ ದುರ್ಬಳಕೆಯ ವಿರುದ್ಧ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕೆಂದು ಕೋರಿದ್ದಾರೆ. ಈಗಾಗಲೇ ಜೂನಿಯರ್ ಎನ್ಟಿಆರ್ ಮತ್ತು ವಿಜಯ್ ದೇವರಕೊಂಡ ಕೂಡ ಈ ಡಿಜಿಟಲ್ ದೌರ್ಜನ್ಯದ ವಿರುದ್ಧ ತೀವ್ರವಾಗಿ ಖಂಡಿಸಿ ಕಮೆಂಟ್ ಮಾಡಿದ್ದಾರೆ.



