ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸದಾ ಕಾಲ ಪರಸ್ಪರ ರಾಜಕೀಯವಾಗಿ ಕಿತ್ತಾಡುತ್ತಿದ್ದ ಅಣ್ಣ-ತಮ್ಮಂದಿರಾದ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಶಿವಸೇನಾ (UBT) ನಾಯಕ ಉದ್ಧವ್ ಠಾಕ್ರೆ ಈಗ ಕೈಜೋಡಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಸಿಡಿದೆದ್ದಿರುವ ಈ ಇಬ್ಬರು ನಾಯಕರು, ಮುಂಬೈನಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗಾಗಿ ಬೃಹತ್ ಜಂಟಿ ಪ್ರತಿಭಟನಾ ರ್‍ಯಾಲಿ ನಡೆಸಲು ಮಹಾರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ.
ಏನಿದು ಇಬ್ಬರ ಜಂಟಿ ಹೋರಾಟ?
ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಹೆಸರಿನಲ್ಲಿ ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ಬದಲಾಯಿಸಲಾಗಿದೆ ಮತ್ತು ಲಕ್ಷಾಂತರ ಅರ್ಹ ಮತದಾರರಿಗೆ ಮೋಸ ಮಾಡಲಾಗಿದೆ ಎಂದು ಠಾಕ್ರೆ ಸೋದರರು ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದನ್ನು ಬಿಟ್ಟು, ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಒಂದು ಅಂಗ ಸಂಸ್ಥೆಯಂತೆ ವರ್ತಿಸುತ್ತಿದೆ ಎಂದು ಇಬ್ಬರೂ ನಾಯಕರು ಜಂಟಿಯಾಗಿ ತೀವ್ರ ಆಕ್ರೋಶ ಹೊರಹಾಕಿದ್ದರು.
ಇದು ರಾಜಕೀಯ ಅಲ್ಲ, ಜನರ ಹೋರಾಟ
ಈ ಬೃಹತ್ ಪ್ರತಿಭಟನೆಯ ಸಿದ್ಧತೆಗಳನ್ನು ಎಂಎನ್‌ಎಸ್ ಮತ್ತು ಶಿವಸೇನಾ (UBT) ಮುಂಚೂಣಿಯಲ್ಲಿ ನಿಂತು ಮಾಡುತ್ತಿದ್ದರೂ, ‘ಇದು ಕೇವಲ ನಮ್ಮ ಪಕ್ಷಗಳ ರಾಜಕೀಯ ಹೋರಾಟವಲ್ಲ’ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ಜನರ ಆಂದೋಲನವಾಗಿದ್ದು, ಕೇಂದ್ರದ ವಿರುದ್ಧ ಬಲಿಷ್ಠ ಒಕ್ಕೂಟ ರಚಿಸಲು ನಾವು ದೇಶದ ಎಲ್ಲಾ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ. ‘ಇದು ಇಡೀ ರಾಜಕೀಯ ವ್ಯವಸ್ಥೆ ಮತ್ತು ದೇಶದ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಧ್ವನಿಯಾಗಬೇಕು’ ಎಂದು ತಿಳಿಸಿದ್ದಾರೆ.
ಮುಂಬೈ ಬೀದಿಗಳಿಗೆ ಬನ್ನಿ ಎಂದು ಕರೆ
ದೇಶದ ಸಂವಿಧಾನ ಮತ್ತು ಸಾಂಸ್ಥಿಕ ಗೌರವವನ್ನು ಉಳಿಸಲು ಇದೊಂದು ಮಾಡು ಇಲ್ಲವೇ ಮಡಿ ಹೋರಾಟ ಎಂದು ಕರೆದಿರುವ ನಾಯಕರು, ಮುಂಬೈನ ಮೆಟ್ರೋ ಸಿನಿಮಾದಿಂದ ಆರಂಭವಾಗಲಿರುವ ಈ ಬೃಹತ್ ಮೆರವಣಿಗೆಯಲ್ಲಿ ನಾಗರಿಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ. “ಬನ್ನಿ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾವೆಲ್ಲರೂ ಒಟ್ಟಾಗಿ ನಿಲ್ಲೋಣ” ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ;
ಇದೇ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ರಾಜ್ ಠಾಕ್ರೆ, ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ದೇಶದಲ್ಲಿ ಮತ್ತೆ ಹಳೆಯ ‘ಬ್ಯಾಲೆಟ್ ಪೇಪರ್’ ಮೂಲಕವೇ ಚುನಾವಣೆ ನಡೆಸಲು ದೇಶದ ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಆಗ್ರಹಿಸಿದ್ದಾರೆ.



