October 4, 2026
Sunday, October 4, 2026
spot_img

750 ಕೆ.ಜಿ. ಚಿನ್ನದ ಅಂಬಾರಿಗೆ ಹೊಸ ಸಾರಥಿ: ಧನಂಜಯನತ್ತ ಅರಣ್ಯ ಇಲಾಖೆಯ ಒಲವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಚಿನ್ನದ ಅಂಬಾರಿ ಹೊರುವ ಗಜಪಡೆಯ ನಾಯಕನ ಆಯ್ಕೆ ಇದೀಗ ಕುತೂಹಲ ಮೂಡಿಸಿದೆ.

ಹೌದು! ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಜವಾಬ್ದಾರಿ ಈ ಬಾರಿ ಯಾವ ಆನೆಗೆ ಸಿಗಲಿದೆ ಎಂಬ ಚರ್ಚೆ ಜೋರಾಗಿದ್ದು, ಅರಣ್ಯ ಇಲಾಖೆಯ ಪರಿಶೀಲನೆಯಲ್ಲಿ ಧನಂಜಯ ಆನೆಯ ಹೆಸರು ಮುಂಚೂಣಿಗೆ ಬಂದಿದೆ.

ತಾಲೀಮಿನ ಪ್ರದರ್ಶನ ಗಮನಿಸುತ್ತಿರೋ ಅಧಿಕಾರಿಗಳು

ಅಂಬಾರಿ ಹೊತ್ತು ಸಾಗುತ್ತಿದ್ದ ಗಜಪಡೆಯ ಹಿರಿಯ ಆನೆ ಅಭಿಮನ್ಯು ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಹೊಸ ಅಂಬಾರಿ ಆನೆಯ ಆಯ್ಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಹೇಂದ್ರ, ಪ್ರಶಾಂತ, ಏಕಲವ್ಯ ಸೇರಿದಂತೆ ಹಲವು ಆನೆಗಳನ್ನು ಪರಿಗಣಿಸಲಾಗಿದ್ದು, ಅವುಗಳ ಸಾಮರ್ಥ್ಯ, ದೈಹಿಕ ಸ್ಥಿರತೆ, ನಡಿಗೆ, ಗಾಂಭೀರ್ಯ ಹಾಗೂ ತಾಲೀಮಿನಲ್ಲಿನ ಪ್ರದರ್ಶನವನ್ನು ಅಧಿಕಾರಿಗಳು ಗಮನಿಸುತ್ತಿದ್ದಾರೆ.

ಮೋಸ್ಟ್ ಲೈಕ್ಲಿ ಧನಂಜಯ

ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅಂಬಾರಿ ಆನೆ ಆಯ್ಕೆ ಕುರಿತು ಸುಳಿವು ನೀಡಿದ್ದು, ಸದ್ಯದ ಸ್ಪರ್ಧೆಯಲ್ಲಿ ಧನಂಜಯ ಮುಂಚೂಣಿಯಲ್ಲಿದ್ದಾನೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋಸ್ಟ್ ಲೈಕ್ಲಿ ಧನಂಜಯ’ ಎಂದು ಹೇಳುವ ಮೂಲಕ ಈ ಬಾರಿ ಚಿನ್ನದ ಅಂಬಾರಿ ಧನಂಜಯನ ಪಾಲಾಗುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಇದನ್ನೂ ಓದಿ:

ಅಭಿಮನ್ಯು ನಿವೃತ್ತಿಯ ನಂತರ ಗಜಪಡೆಯಲ್ಲಿರುವ ಆನೆಗಳಿಗೆ ವಿಶೇಷ ತಾಲೀಮು ನೀಡಲಾಗುತ್ತಿದೆ. ಜಂಬೂಸವಾರಿಯಂತಹ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವುದು ಸುಲಭದ ಕೆಲಸವಲ್ಲ. ಹೀಗಾಗಿ ಆನೆಯ ದೈಹಿಕ ಸಾಮರ್ಥ್ಯದ ಜತೆಗೆ ಜನಸಂದಣಿ, ಶಬ್ದ, ಮೆರವಣಿಗೆಯ ವಾತಾವರಣ ಹಾಗೂ ನಿರಂತರ ನಡಿಗೆಯನ್ನು ನಿಭಾಯಿಸುವ ಸಾಮರ್ಥ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ.

ಸ್ಪರ್ಧೆಯಲ್ಲಿರುವ ಪ್ರಶಾಂತ, ಏಕಲವ್ಯ

ಧನಂಜಯ ಈಗಾಗಲೇ ವಿವಿಧ ತಾಲೀಮು ಹಂತಗಳಲ್ಲಿ ಗಮನ ಸೆಳೆದಿದ್ದು, ಆತನ ಸಾಮರ್ಥ್ಯ ಮತ್ತು ಗಾಂಭೀರ್ಯ ಅಂಬಾರಿ ಹೊರುವ ಅವಕಾಶಕ್ಕೆ ಪೂರಕವಾಗಿವೆ ಎನ್ನಲಾಗುತ್ತಿದೆ. ಇದೇ ವೇಳೆ ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯ ಕೂಡ ಸ್ಪರ್ಧೆಯಲ್ಲಿರುವುದರಿಂದ ಅಂತಿಮ ಕ್ಷಣದಲ್ಲಿ ಆಯ್ಕೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Must Read