ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾರಾಟದ ವೇಳೆ ಕಾಕ್ಪಿಟ್ನಲ್ಲಿ ಎದುರಾದ ಮಾರಣಾಂತಿಕ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದೆ ವಿಮಾನದಲ್ಲಿದ್ದವರ ಸುರಕ್ಷತೆಗೆ ನೆರವಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಶೇಷ ಗೌರವ ಸೂಚಿಸಿದ್ದಾರೆ.
ಗೌರವ ಜ್ಯೋತಿ ಬೆಳಗಿಸುವಂತೆ ಮನವಿ
ಮುಂದಿನ ವರ್ಷದ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಸ್ಮಿತ್ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವ ನೆತನ್ಯಾಹು, ಸಮಾರಂಭದಲ್ಲಿ ಗೌರವ ಜ್ಯೋತಿ ಬೆಳಗಿಸುವಂತೆ ಮನವಿ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದೇ ಕಾರ್ಯಕ್ರಮಕ್ಕೆ ಆಹ್ವಾನ ನೀಡುವುದಾಗಿ ಅವರು ತಿಳಿಸಿದ್ದಾರೆ.
ಏನಿದು ಘಟನೆ?
ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ಹಾರಾಟದ ಮಧ್ಯೆ ಸಹ-ಪೈಲಟ್ ಕಾಕ್ಪಿಟ್ನಲ್ಲೇ ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದರೂ ಸ್ಮಿತ್ ಕಾಕ್ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಪ್ರಯಾಣಿಕರು ಹಾಗೂ ಇತರ ಸಿಬ್ಬಂದಿ ಮಧ್ಯಪ್ರವೇಶಿಸಲು ಸಾಧ್ಯವಾಗಿದ್ದು, ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ನೆರವಾಯಿತು. ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ಗೆ ಸುರಕ್ಷಿತವಾಗಿ ತಿರುಗಿಸಿ ಇಳಿಸಲಾಯಿತು.
ಇದನ್ನೂ ಓದಿ:
ನೆತನ್ಯಾಹು ಜೊತೆ ದೂರವಾಣಿ ಮಾತುಕತೆ
ನೆತನ್ಯಾಹು ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಸ್ಮಿತ್ ಮಚ್ಚರ್ ದಾಳಿಯ ಕ್ಷಣಗಳನ್ನು ವಿವರಿಸಿದ್ದಾರೆ. ಸಹ-ಪೈಲಟ್ ಪ್ರಾರ್ಥನೆಗಾಗಿ ಸಮಯ ಕೇಳಿದ್ದ ಬಳಿಕ, ಕೆಲವು ನಿಮಿಷಗಳ ನಂತರ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿದ್ದಿತು ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ ವಿಮಾನಕ್ಕೆ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಭಾವಿಸಿದ್ದ ಅವರು, ನಂತರ ದಾಳಿ ನಡೆಯುತ್ತಿರುವುದು ಅರಿವಾಯಿತು ಎಂದು ವಿವರಿಸಿದ್ದಾರೆ. ಗಾಯಗಳ ನಡುವೆಯೂ ಕಾಕ್ಪಿಟ್ ಬಾಗಿಲು ತೆರೆಯಲು ಕೊನೆಯ ಶಕ್ತಿಯನ್ನೂ ಬಳಸಿದ್ದಾಗಿ ತಿಳಿಸಿದ್ದಾರೆ.
ಇಡೀ ಜಗತ್ತಿನ ಪಾಲಿಗೆ ಹೀರೋ
ಈ ವೇಳೆ ಸ್ಮಿತ್ ಮಚ್ಚರ್ ಅವರನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು, ಭಾರತ ಮತ್ತು ಇಸ್ರೇಲ್ ಮಾತ್ರವಲ್ಲ, ಇಡೀ ಜಗತ್ತಿನ ಪಾಲಿಗೆ ಅವರು ಹೀರೋ ಎಂದು ಶ್ಲಾಘಿಸಿದ್ದಾರೆ. ಮುಂದಿನ ಮೇ ತಿಂಗಳ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ಮಿತ್ ಮತ್ತು ಪ್ರಧಾನಿ ಮೋದಿ ಅವರನ್ನು ಗೌರವಿಸುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ಯುಎಇ ಅಧಿಕಾರಿಗಳ ಪ್ರಕಾರ, ಸಹ-ಪೈಲಟ್ ತುರ್ತು ಕಾಕ್ಪಿಟ್ ಕೊಡಲಿಯನ್ನು ಬಳಸಿ ದಾಳಿ ನಡೆಸಿದ್ದಾನೆ ಮತ್ತು ಪ್ರಕರಣದ ತನಿಖೆಯಲ್ಲಿ ಭಯೋತ್ಪಾದಕ ಕೃತ್ಯದ ಉದ್ದೇಶವಿತ್ತೇ ಎಂಬ ಅಂಶವೂ ಪರಿಶೀಲಿಸಲಾಗಿದೆ.



