October 4, 2026
Sunday, October 4, 2026
spot_img

2006ರ ಆತ್ಮಹ*ತ್ಯೆ ಪ್ರಕರಣ ಮತ್ತೆ ಜೀವಂತ: ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಕೇರಳದಲ್ಲಿ ವಿಜಿಲೆನ್ಸ್ ತನಿಖೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕೇರಳದ ಅಧಿಕಾರಾವಧಿಗೆ ಸಂಬಂಧಿಸಿದ ಎರಡು ದಶಕಗಳ ಹಿಂದಿನ ಪ್ರಕರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ.

2006ರಲ್ಲಿ ಕೇರಳ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತನಿಖೆಗೆ ಆದೇಶಿಸಿದ್ದಾರೆ.

ಮಲೇಷ್ಯಾದ ಸಿವಿಲ್ ಎಂಜಿನಿಯರ್ ಆತ್ಮಹತ್ಯೆ

ಈ ಪ್ರಕರಣವು ಕೇರಳ ಸ್ಟೇಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್‌ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಎಂಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದೆ. ವಿಶ್ವಬ್ಯಾಂಕ್ ನೆರವಿನ ಸುಮಾರು 215 ಕೋಟಿ ಮೌಲ್ಯದ ಯೋಜನೆಯಲ್ಲಿ ಮಲೇಷ್ಯಾ ಮೂಲದ ಸಂಸ್ಥೆ ಹಾಗೂ ಭಗೀರಥ ಎಂಜಿನಿಯರಿಂಗ್ ಒಳಗೊಂಡ PATI-BEL ಒಕ್ಕೂಟ ಕಾಮಗಾರಿ ನಡೆಸುತ್ತಿತ್ತು. ಇದೇ ಯೋಜನೆಗೆ ಸಂಬಂಧಿಸಿದ್ದ ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬೀನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಆತ್ಮಹತ್ಯೆ ಪತ್ರದಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರು ಉಲ್ಲೇಖವಾಗಿತ್ತು ಎಂಬ ಆರೋಪ ಇದೀಗ ಮತ್ತೆ ಚರ್ಚೆಗೆ ಬಂದಿದೆ.

ಇದನ್ನೂ ಓದಿ:

ತನಿಖೆ ಪೂರ್ಣಗೊಳ್ಳುವ ಮುನ್ನವೇ ಸ್ಥಗಿತ

ಈ ಪ್ರಕರಣದಲ್ಲಿ 2006ರಲ್ಲೇ ವಿಜಿಲೆನ್ಸ್‌ನಿಂದ ಪ್ರಾಥಮಿಕ ವಿಚಾರಣೆ ನಡೆದಿತ್ತು. ಆದರೆ ತನಿಖೆ ಪೂರ್ಣಗೊಳ್ಳುವ ಮುನ್ನವೇ ಅದು ಸ್ಥಗಿತಗೊಂಡಿತು ಎಂಬ ಆರೋಪವಿದೆ. ತನಿಖೆಯ ಮೇಲೆ ಹೊರಗಿನ ಪ್ರಭಾವ ಬೀರಲಾಗಿತ್ತು ಎಂಬ ಹೊಸ ದೂರಿನ ಹಿನ್ನೆಲೆಯಲ್ಲಿ ಹಳೆಯ ದಾಖಲೆಗಳು ಹಾಗೂ ಕಡತಗಳನ್ನು ಗೃಹ ಇಲಾಖೆ ಮತ್ತೆ ಕೋರಿದೆ.

ಕಾಂಗ್ರೆಸ್ ನಾಯಕ ಮಲಯಿನ್‌ಕೀಝು ವೆಣುಗೋಪಾಲ್ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ದೂರನ್ನು ಪರಿಶೀಲಿಸಿದ ಬಳಿಕ ತನಿಖೆ ಅಗತ್ಯವೆಂದು ಕಂಡುಬಂದಿದೆ ಎಂದು ಚೆನ್ನಿತ್ತಲ ತಿಳಿಸಿದ್ದಾರೆ. ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರೊಂದಿಗೆ ಚರ್ಚಿಸಿದ ಬಳಿಕ ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ಅವರಿಗೆ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Must Read