October 4, 2026
Sunday, October 4, 2026
spot_img

ಅದ್ಧೂರಿಯಾಗಿ ನೆರವೇರಿದ ಹಿಂದೂ ಮಹಾಗಣಪತಿ ಶೋಭಾಯಾತ್ರೆ: ಅಪ್ಪನ ಕೆರೆಯಲ್ಲಿ ವಿಸರ್ಜನೆ

ಹೊಸದಿಗಂತ ವರದಿ ಕಲಬುರಗಿ:

ನಗರದ ಕೋಟೆ ಮುಂಭಾಗದಲ್ಲಿ 21 ದಿನಗಳ ಕಾಲ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ಅದ್ಧೂರಿ ಶೋಭಾಯಾತ್ರೆ ಹಾಗೂ ವಿಸರ್ಜನಾ ಕಾರ್ಯಕ್ರಮ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು.

ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಶೋಭಾಯಾತ್ರೆಗೆ ಚಾಲನೆ ನೀಡಿದರು. ಕೋಟೆ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಪ್ಪನ ಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.

ಶೋಭಾಯಾತ್ರೆಯುದ್ದಕ್ಕೂ ‘ಗಣಪತಿ ಬಪ್ಪಾ ಮೋರಿಯಾ’, ‘ಭಾರತ ಮಾತಾ ಕೀ ಜೈ’ ಘೋಷಣೆಗಳು ಮೊಳಗಿದವು. ಭಜನೆ, ನಾಮಸ್ಮರಣೆ ಹಾಗೂ ದೇಶಭಕ್ತಿ ಗೀತೆಗಳ ನಡುವೆ ಭಕ್ತರು ಸಂಭ್ರಮಿಸಿದರು. ನಾಸಿಕ್ ಡೋಲು, ಡೊಳ್ಳು, ಭಜನಾ ಮಂಡಳಿಗಳು, ಗೊಂಬೆ ಕುಣಿತ ಸೇರಿದಂತೆ ವಿವಿಧ ದೇಶಿ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.

ಇದನ್ನೂ ಓದಿ:

ನಾಸಿಕ್ ಡೋಲು ತಂಡ, ಮಂಗಳೂರಿನ 30 ಸದಸ್ಯರ ಭಜನಾ ತಂಡ, ಸಾರವಾಡದ ಗೊಂಬೆ ಕುಣಿತ ತಂಡ ಸೇರಿದಂತೆ 15ಕ್ಕೂ ಹೆಚ್ಚು ಭಜನಾ ಮಂಡಳಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಭಾರತೀಯ ಸೇನೆಯ ಸಾಹಸಿ ಅಧಿಕಾರಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಭಾವಚಿತ್ರ ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿತ್ತು. ವಿವಿಧ ಮಠಾಧೀಶರು, ಆರ್‌ಎಸ್‌ಎಸ್ ಮುಖಂಡರು, ಜನಪ್ರತಿನಿಧಿಗಳು, ಹಿಂದೂ ಮಹಾಗಣಪತಿ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭದ್ರತೆಗಾಗಿ 478 ಪೊಲೀಸ್ ಸಿಬ್ಬಂದಿ ಹಾಗೂ 150 ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸುಗಮವಾಗಿ ಸಾಗುವಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

Must Read