October 4, 2026
Sunday, October 4, 2026
spot_img

ಮೂರು ಪಂದ್ಯ, ಹತ್ತು ಶತಕ, ಒಂದು ದ್ವಿಶತಕ: ಇಂಡೋ-ವಿಂಡೀಸ್ ಸರಣಿಯಲ್ಲಿ ದಾಖಲೆಗಳ ಮಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯು ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ರೋಮಾಂಚನಕಾರಿ ಮನರಂಜನೆ ನೀಡಿದೆ. ಬ್ಯಾಟರ್‌ಗಳ ಅಬ್ಬರಕ್ಕೆ ಬೌಲರ್‌ಗಳು ತತ್ತರಿಸಿಹೋದ ಈ ಸರಣಿಯಲ್ಲಿ, ಆತಿಥೇಯ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ಪ್ರತಿಯೊಂದು ಪಂದ್ಯದಲ್ಲೂ ರನ್‌ಗಳ ಹೊಳೆಯೇ ಹರಿದಿದ್ದು, ದಾಖಲೆಗಳ ಮೇಲೆ ದಾಖಲೆಗಳು ನಿರ್ಮಾಣವಾಗಿವೆ.

ಈ ಸರಣಿಯುದ್ಧಕ್ಕೂ ಬ್ಯಾಟಿಂಗ್ ವಿಭಾಗದ ಪಾರಮ್ಯವೇ ಎದ್ದು ಕಾಣುತ್ತಿತ್ತು. ಪ್ರತಿಯೊಂದು ಪಂದ್ಯದಲ್ಲೂ ಎರಡೂ ತಂಡಗಳು ಅತ್ಯಂತ ಸುಲಭವಾಗಿ 300ರನ್‌ಗಳ ಗಡಿಯನ್ನು ದಾಟಿದವು. ವಿಶೇಷವಾಗಿ ಎರಡನೇ ಏಕದಿನ ಪಂದ್ಯದಲ್ಲಂತೂ ರನ್ ಮಳೆಯೇ ಸುರಿದಿತ್ತು. ಎರಡೂ ತಂಡಗಳು ಸೇರಿ ಬರೋಬ್ಬರಿ 400ಕ್ಕೂ ಹೆಚ್ಚು ರನ್ ಕಲೆಹಾಕಿದ್ದವು. ಬೌಲರ್‌ಗಳ ಪಾಲಿಗೆ ಈ ಸರಣಿ ಸಂಪೂರ್ಣವಾಗಿ ಕಠಿಣ ಸವಾಲಾಗಿ ಪರಿಣಮಿಸಿತು.

ಕೇವಲ ಮೂರು ಪಂದ್ಯಗಳ ಸರಣಿಯಲ್ಲಿ ಬರೋಬ್ಬರಿ 10 ಶತಕಗಳು ದಾಖಲಾಗಿರುವುದು ಈ ಸರಣಿಯ ವೈಶಿಷ್ಟ್ಯ. ಕಳೆದ ಹತ್ತು ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಸರಣಿಯಲ್ಲಿ ಇಷ್ಟೊಂದು ಶತಕಗಳು ದಾಖಲಾಗಿರುವುದು ಇದೇ ಮೊದಲು.

ದ್ವಿಪಕ್ಷೀಯ ಏಕದಿನ ಸರಣಿಯೊಂದರಲ್ಲಿ ಅತಿ ಹೆಚ್ಚು ಶತಕಗಳು ದಾಖಲಾದ ಪಟ್ಟಿಯಲ್ಲಿ ಈ ಸರಣಿ ಈಗ ಎರಡನೇ ಸ್ಥಾನ ಪಡೆದುಕೊಂಡಿದೆ. 2016ರಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಸರಣಿಯಲ್ಲಿ 11 ಶತಕಗಳು ದಾಖಲಾಗಿದ್ದವು. ಆದರೆ ಈಗ ಕೇವಲ ೩ ಪಂದ್ಯಗಳಲ್ಲೇ 10 ಶತಕಗಳು ಸಿಡಿದು 2013ರ ಭಾರತ-ಆಸ್ಟ್ರೇಲಿಯಾ ಸರಣಿಯ (9 ಶತಕಗಳು) ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆಯಲಾಗಿದೆ.

ಅಂತಿಮ ಪಂದ್ಯವನ್ನು ವೆಸ್ಟ್ ಇಂಡೀಸ್ ಗೆದ್ದುಕೊಂಡರೂ, ಮೊದಲ ಎರಡು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ್ದ ಭಾರತ ಸರಣಿ ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಒಟ್ಟಿನಲ್ಲಿ ಈ ಸರಣಿಯು ಪ್ರೇಕ್ಷಕರಿಗೆ ಹಬ್ಬವಾಗಿದ್ದಂತೂ ಸುಳ್ಳಲ್ಲ.

Must Read