October 4, 2026
Sunday, October 4, 2026
spot_img

ಬರದ ಹೊಡೆತಕ್ಕೆ ನೆಲಕಚ್ಚಿದ ಬೆಳೆ: ರೈತರ ಅಳಲು ಆಲಿಸಿದ ಕೇಂದ್ರ ಬರ ಅಧ್ಯಯನ ತಂಡ

ಹೊಸದಿಗಂತ ವರದಿ ಚಿತ್ರದುರ್ಗ:

ಮಳೆ ಕೈಕೊಟ್ಟ ಪರಿಣಾಮ ಬೆಳೆ ನಷ್ಟ, ಅಂತರ್ಜಲ ಕುಸಿತ ಹಾಗೂ ಹೆಚ್ಚುತ್ತಿರುವ ಕೃಷಿ ವೆಚ್ಚದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಪರಿಸ್ಥಿತಿಯನ್ನು ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಕಣ್ಣಾರೆ ಕಂಡಿತು. ಮೊದಲ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ತಂಡ, ಒಣಗಿದ ಬೆಳೆಗಳು ಹಾಗೂ ರೈತರ ಸಂಕಷ್ಟವನ್ನು ಪರಿಶೀಲಿಸಿತು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ನೇತೃತ್ವದಲ್ಲಿ ಉಪನಿರ್ದೇಶಕ ಚೇತ್ ರಾಮ್ ಮೀನಾ, ಕೇಂದ್ರ ನೀತಿ ಆಯೋಗದ ಓಎಸ್‌ಡಿ ಕರ್ನಲ್ ಅಮರೇಂದ್ರ ಸಿಂಗ್ ಹಾಗೂ ಜಲಸಂಪನ್ಮೂಲ ಮತ್ತು ನದಿ ಪುನಶ್ಚೇತನ ನಿರ್ದೇಶಕ ಡಾ. ಜೆ. ಹರ್ಷ ಅವರನ್ನೊಳಗೊಂಡ ತಂಡ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಸಕ್ಕರ ಗ್ರಾಮಕ್ಕೆ ಭೇಟಿ ನೀಡಿತು.

ಗ್ರಾಮದ ರೈತ ತಿರುಮಲಪ್ಪ ಅವರ 2.5 ಎಕರೆ ಜಮೀನಿನಲ್ಲಿ ಶೇಂಗಾ ಬೆಳೆ ಸಂಪೂರ್ಣ ಒಣಗಿ ಹೋಗಿರುವುದನ್ನು ತಂಡ ಪರಿಶೀಲಿಸಿತು. ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಸುಮಾರು ₹86,893 ಖರ್ಚು ಮಾಡಿದ್ದರೂ ಮಳೆಯ ಕೊರತೆಯಿಂದ ಬೆಳೆ ಕೈಕೊಟ್ಟಿದೆ ಎಂದು ತಿರುಮಲಪ್ಪ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಈಗಾಗಲೇ ಸುಮಾರು 1 ಲಕ್ಷ ನಷ್ಟ ಅನುಭವಿಸಿರುವುದಾಗಿ ತಿಳಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತುರ್ತು ನೆರವು ನೀಡುವಂತೆ ಮನವಿ ಮಾಡಿದರು.

ಇದನ್ನೂ ಓದಿ:

ಮುಕುಂದಪ್ಪ ಅವರ ಜಮೀನಿನಲ್ಲಿ ಅಂತರ್ಜಲ ಮಟ್ಟ ಕುಸಿದ ಪರಿಣಾಮ ನೀರಾವರಿ ಆಧಾರಿತ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳು ಕುಂಠಿತವಾಗಿರುವುದನ್ನು ತಂಡ ವೀಕ್ಷಿಸಿತು. ಮತ್ತೊಂದೆಡೆ, ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ಜಾನುವಾರುಗಳಿಗೆ ಮೇವಾಗಿ ಬಳಸಲು ಬೆಳೆ ಕಟಾವು ಮಾಡಿದ್ದ ರೈತ ನಾಗರಾಜ ಅವರ ಪರಿಸ್ಥಿತಿಯನ್ನೂ ಅಧಿಕಾರಿಗಳು ಆಲಿಸಿದರು.

ಸುಮಾರು 10 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತಿದ್ದ ರೈತ ತಿಪ್ಪಯ್ಯ ಅವರ ಹೊಲಕ್ಕೂ ತಂಡ ಭೇಟಿ ನೀಡಿತು. ಬೋರ್‌ವೆಲ್‌ಗಳಲ್ಲಿ ನೀರು ಸಿಗದೆ ವಿಫಲವಾಗಿದ್ದು, ಮಳೆ ಕೊರತೆಯಿಂದ ತೊಗರಿ ಗಿಡಗಳು ಸರಿಯಾಗಿ ಬೆಳೆಯದೆ ಸಂಪೂರ್ಣ ನಷ್ಟವಾಗಿರುವುದಾಗಿ ಅವರು ತಿಳಿಸಿದರು. 62,025 ವೆಚ್ಚ ಮಾಡಿದ್ದರೂ ಒಂದು ಕಾಳು ತೊಗರಿಯೂ ಸಿಗುವ ಪರಿಸ್ಥಿತಿ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೆರೆಗಳ ಪುನಶ್ಚೇತನಕ್ಕೆ ರೈತರ ಮನವಿ

ಗ್ರಾಮದ ಇತರ ರೈತರ ಜಮೀನುಗಳಿಗೆ ಭೇಟಿ ನೀಡಿದ ತಂಡ ಮೆಕ್ಕೆಜೋಳ, ಪಪ್ಪಾಯಿ ಹಾಗೂ ತೆಂಗು ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿತು. ರೈತರಿಂದ ಕಿಸಾನ್ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಹೈನುಗಾರಿಕೆ ಕುರಿತ ಮಾಹಿತಿಯನ್ನೂ ಪಡೆಯಿತು.

ರೈತ ಮುಖಂಡ ಎಸ್.ಎನ್. ಗಿರಿ, ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ನಿರಂತರವಾಗಿ ಕುಸಿಯುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ ಕೆರೆಗಳನ್ನು ತುಂಬಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಂಡದ ಗಮನಕ್ಕೆ ತಂದರು.

ನಂತರ ಹೊಸಕೆರೆ ಗ್ರಾಮಕ್ಕೆ ತೆರಳಿದ ಕೇಂದ್ರ ತಂಡ ಜಲಮೂಲಗಳ ಸಂರಕ್ಷಣಾ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿತು. ಜಲ ಜೀವನ್ ಮಿಷನ್ ಅಡಿಯಲ್ಲಿ ಮನೆಗಳಿಗೆ ಕಲ್ಪಿಸಿರುವ ನಳ ಸಂಪರ್ಕದ ಕಾರ್ಯಕ್ಷಮತೆಯನ್ನೂ ಪರಿಶೀಲಿಸಿತು. ಬಳಿಕ ರೈತರ ಹೊಲಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದ ಹಾನಿಗೊಳಗಾದ ತೊಗರಿ, ಹುರುಳಿ ಹಾಗೂ ಮಿಡಿ ಸೌತೆ ಬೆಳೆಗಳ ಸ್ಥಿತಿಯನ್ನು ವೀಕ್ಷಿಸಿತು.

Must Read