ಹೊಸದಿಗಂತ ವರದಿ ಯಾದಗಿರಿ:
ಯಾದಗಿರಿ ಜಿಲ್ಲೆಯಲ್ಲಿ ತೀವ್ರವಾಗಿರುವ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಶಹಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ರೈತರ ಪರಿಸ್ಥಿತಿಯನ್ನು ಪರಿಶೀಲಿಸಿತು. ಒಣಗಿ ನಿಂತ ಹತ್ತಿ ಬೆಳೆಗಳನ್ನು ಕಂಡ ತಂಡ, ರೈತರಿಂದ ಬೆಳೆ ನಷ್ಟ ಹಾಗೂ ಕೃಷಿ ವೆಚ್ಚದ ಕುರಿತು ಮಾಹಿತಿ ಪಡೆದುಕೊಂಡಿತು.
ನಿರ್ದೇಶಕ ಡಾ. ಮನ್ ಸಿಂಗ್ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳಾದ ಪಾರ್ಥಪಾಲ್ ಹಾಗೂ ರಾಕೇಶ್ ಕುಮಾರ್ ಒಳಗೊಂಡ ತಂಡ ಬೆಳಿಗ್ಗೆ ಯಾದಗಿರಿಯಿಂದ ಶಹಾಪುರಕ್ಕೆ ತೆರಳಿ ಗುಂಡಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ನಿಂಗವ್ವ ಅವರ ಹತ್ತಿ ಜಮೀನಿಗೆ ಭೇಟಿ ನೀಡಿತು. ಅಲ್ಲಿ ಮಳೆ ಕೊರತೆಯಿಂದ ಒಣಗಿ ನಿಂತಿದ್ದ ಹತ್ತಿ ಬೆಳೆಯನ್ನು ತಂಡ ಪರಿಶೀಲಿಸಿತು.
ಜಮೀನಿನ ಮಾಲೀಕರ ಪರವಾಗಿ ರೈತ ಶರಣಪ್ಪ ಅವರು ಅಧಿಕಾರಿಗಳಿಗೆ ಬೆಳೆ ಹಾನಿಯ ಕುರಿತು ಮಾಹಿತಿ ನೀಡಿದರು. ಒಂದೂವರೆ ಎಕರೆ ಜಮೀನಿನಲ್ಲಿ ಹತ್ತಿ ಬಿತ್ತನೆಗಾಗಿ ಸುಮಾರು 30 ಸಾವಿರ ಖರ್ಚು ಮಾಡಲಾಗಿತ್ತು. ಸಾಮಾನ್ಯವಾಗಿ ಎಕರೆಗೆ ಸುಮಾರು 10 ಕ್ವಿಂಟಾಲ್ ಹತ್ತಿ ಇಳುವರಿ ನಿರೀಕ್ಷಿಸಲಾಗುತ್ತಿತ್ತು. ಆದರೆ ಮಳೆ ಕೈಕೊಟ್ಟ ಪರಿಣಾಮ ಕೇವಲ ಒಂದು ಕ್ವಿಂಟಾಲ್ನಿಂದ ಒಂದೂವರೆ ಕ್ವಿಂಟಾಲ್ವರೆಗೆ ಮಾತ್ರ ಹತ್ತಿ ಬೆಳೆದಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:
ಮಳೆ ಕೊರತೆಯಿಂದ ಗುಂಡಳ್ಳಿ ಗ್ರಾಮದ ಬಹುತೇಕ ಹತ್ತಿ ಬೆಳೆಗಳು ಒಣಗಿ ಹೋಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಶರಣಪ್ಪ ತಂಡದ ಗಮನಕ್ಕೆ ತಂದರು. ಬೆಳೆಗಾಗಿ ಮಾಡಿರುವ ಖರ್ಚು ಕೂಡ ವಾಪಸ್ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಬರದಿಂದ ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ವಿವರಿಸಿದರು.
ಸ್ಥಳದಲ್ಲಿದ್ದ ರೈತರಾದ ದೇವೇಂದ್ರಪ್ಪ, ಮೊಹಮ್ಮದ್ ಖಾದ್ರಿ, ಸಿದ್ದಣ್ಣ, ಕಾಶಿಪತಿ ಹಾಗೂ ರಮೇಶ್ ಚವ್ಹಾಣ ಅವರು ಕೂಡ ತಮ್ಮ ಜಮೀನುಗಳಲ್ಲಿ ಉಂಟಾಗಿರುವ ಬೆಳೆ ಹಾನಿ, ಮಳೆ ಕೊರತೆ ಹಾಗೂ ಕೃಷಿ ವೆಚ್ಚದ ಕುರಿತು ಕೇಂದ್ರ ತಂಡಕ್ಕೆ ವಿವರಿಸಿದರು.
ನಂತರ ಕೇಂದ್ರ ತಂಡ ಶಹಾಪುರ ತಾಲೂಕಿನ ದೊರನಹಳ್ಳಿ, ಬಿದರಣಿ, ಮದ್ದರಕಿ, ಮುಡಬೂಳ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿತು. ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಬರದಿಂದ ಉಂಟಾಗಿರುವ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಿತು.
ರೈತರ ನಿರೀಕ್ಷೆ ಪರಿಹಾರದತ್ತ
ಕೇಂದ್ರ ಅಧ್ಯಯನ ತಂಡದ ಭೇಟಿ ಸಂದರ್ಭದಲ್ಲಿ ರೈತರು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ, ಬರ ಪರಿಹಾರ ಕ್ರಮಗಳು ಹಾಗೂ ಕೃಷಿಗೆ ಅಗತ್ಯವಾದ ನೆರವು ಒದಗಿಸುವಂತೆ ಮನವಿ ಮಾಡಿದ್ದಾರೆ. ವಿವಿಧ ಗ್ರಾಮಗಳಲ್ಲಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿರುವ ತಂಡ, ರೈತರ ಸಮಸ್ಯೆಗಳನ್ನು ದಾಖಲಿಸಿಕೊಂಡಿದೆ. ತಂಡದ ವರದಿ ಹಾಗೂ ಮುಂದಿನ ಕ್ರಮಗಳ ಮೇಲೆ ಬರಪೀಡಿತ ರೈತರ ನಿರೀಕ್ಷೆ ನೆಟ್ಟಿದೆ.



