ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಪೌಷ್ಟಿಕಾಂಶಯುಕ್ತ ‘ಮೂಂಗ್ ದಾಲ್ ಪರೋಟ’ ರೆಸಿಪಿ
ಏನೇನ್ ಬೇಕು:
ಹೆಸರು ಬೇಳೆ
ಗೋಧಿ ಹಿಟ್ಟು
ಈರುಳ್ಳಿ
ಹಸಿ ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಖಾರದ ಪುಡಿ, ಜೀರಿಗೆ, ಗರಂ ಮಸಾಲಾ
ಕೊತ್ತಂಬರಿ ಸೊಪ್ಪು
ಉಪ್ಪು ಹಾಗೂ ತುಪ್ಪ
ಮಾಡೋದು ಹೇಗೆ ನೋಡ್ಕೊಳ್ಳಿ
ಮೊದಲು ನೆನೆಸಿದ ಹೆಸರು ಬೇಳೆಯನ್ನು ನೀರಿಲ್ಲದೆ ಸೋಸಿ, ಮಿಕ್ಸಿ ಜಾರ್‌ಗೆ ಹಾಕಿ. ಅದಕ್ಕೆ ಹಸಿ ಮೆಣಸಿನಕಾಯಿ, ಶುಂಠಿ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಗೋಧಿ ಹಿಟ್ಟು, ರುಬ್ಬಿದ ಹೆಸರು ಬೇಳೆ ಮಿಶ್ರಣ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಖಾರದ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರು ಚಿಮುಕಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು, ಮೇಲೆ ಸ್ವಲ್ಪ ಎಣ್ಣೆ ಸವರಿ 10 ನಿಮಿಷ ಮುಚ್ಚಿಡಿ. ಕಲಸಿದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಒಣ ಹಿಟ್ಟು ಉದುರಿಸಿ ಸ್ವಲ್ಪ ದಪ್ಪವಾಗಿ ಪರೋಟಗಳನ್ನು ಲಟ್ಟಿಸಿಕೊಳ್ಳಿ. ಕಾಯಿಸಿದ ಹೆಂಚಿನ ಮೇಲೆ ಲಟ್ಟಿಸಿದ ಪರೋಟ ಹಾಕಿ, ಎರಡೂ ಕಡೆ ತುಪ್ಪ ಸವರಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಸುಟ್ಟರೆ ಬಿಸಿಬಿಸಿ ಮೂಂಗ್ ದಾಲ್ ಪರೋಟ ಸಿದ್ಧ.
ಈ ಮೂಂಗ್ ದಾಲ್ ಪರೋಟವನ್ನು ಮೊಸರು, ಉಪ್ಪಿನಕಾಯಿ ಅಥವಾ ಬೆಣ್ಣೆಯ ಜೊತೆ ಸವಿದರೆ ಅದರ ರುಚಿಯೇ ಬೇರೆ.
ಇದು ತಿನ್ನೋದ್ರಿಂದ ಏನೇನ್ ಲಾಭಗಳಿವೆ?
ಹೆಸರು ಬೇಳೆಯಲ್ಲಿ ಸಮೃದ್ಧ ಪ್ರೋಟೀನ್ ಇರುವುದರಿಂದ ಮಾಂಸಖಂಡಗಳ ಬಲವರ್ಧನೆಗೆ ಮತ್ತು ತೂಕ ನಿಯಂತ್ರಣಕ್ಕೆ ಇದು ಬೆಸ್ಟ್.
ಇತರ ಬೇಳೆಕಾಳುಗಳಿಗೆ ಹೋಲಿಸಿದರೆ ಹೆಸರು ಬೇಳೆ ಹೊಟ್ಟೆಗೆ ಗ್ಯಾಸ್ಟ್ರಿಕ್ ಉಂಟುಮಾಡುವುದಿಲ್ಲ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.
ಖಾರ ಮತ್ತು ಮಸಾಲೆಗಳ ಹದವಾದ ಸಮ್ಮಿಲನದಿಂದಾಗಿ ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಶಾಲೆಗೆ ಕಳುಹಿಸುವ ಟಿಫಿನ್ ಬಾಕ್ಸ್ ಗೂ ಇದು ಹೇಳಿಮಾಡಿಸಿದ ತಿಂಡಿ.
ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ.



