October 5, 2026
Monday, October 5, 2026
spot_img

ಚಿತ್ರಮಂದಿರದ ಹೈ ಸೌಂಡ್: ಮಕ್ಕಳ ಕಿವಿ, ಗರ್ಭಿಣಿಯರ ಆರೋಗ್ಯದ ಮೇಲೆ ಬೀರುವ ಪ್ರಭಾವವೇನು?

ಚಿತ್ರಮಂದಿರದ ದೊಡ್ಡ ಪರದೆ, ರೋಮಾಂಚಕ ಶಬ್ದ ಮತ್ತು ಕತ್ತಲಾವೃತ ವಾತಾವರಣ ಪ್ರತಿಯೊಬ್ಬರಿಗೂ ನೆಚ್ಚಿನ ಅನುಭವ ನೀಡುತ್ತದೆ. ಆದರೆ, ಸಣ್ಣ ಮಕ್ಕಳನ್ನು ಥಿಯೇಟರ್‌ಗೆ ಕರೆದುಕೊಂಡು ಹೋಗುವುದು ಸೂಕ್ತವೇ? ಹಾಗೂ ಗರ್ಭಿಣಿಯರು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವುದು ಸುರಕ್ಷಿತವೇ? ಎನ್ನುವ ಗೊಂದಲಗಳು ಹಲವರಲ್ಲಿ ಮೂಡುವುದು ಸಹಜ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಣ್ಣ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆದೊಯ್ಯಲು 3 ರಿಂದ 4 ವರ್ಷ ದಾಟುವವರೆಗೆ ಕಾಯುವುದು ಸೂಕ್ತ.

2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಕಿವಿಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಥಿಯೇಟರ್‌ಗಳಲ್ಲಿ ಧ್ವನಿಯ ಮಟ್ಟ ಬಹಳ ಹೆಚ್ಚಿರುತ್ತದೆ. ಇದು ಮಗುವಿನ ಶ್ರವಣ ಶಕ್ತಿಗೆ ತೊಂದರೆ ಉಂಟುಮಾಡಬಹುದು.

3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಥೆ ಅರ್ಥವಾಗಲು ಪ್ರಾರಂಭವಾಗುತ್ತದೆ ಮತ್ತು ಒಂದೆಡೆ ಕುಳಿತು ಸಿನಿಮಾ ನೋಡುವ ತಾಳ್ಮೆ ಮೂಡುತ್ತದೆ.

ಮೊದಲ ಬಾರಿಗೆ ಮಕ್ಕಳನ್ನು ಕರೆದೊಯ್ಯುವಾಗ ಅನಿಮೇಷನ್, ಕಾಮಿಡಿ ಅಥವಾ ಮಕ್ಕಳ ಚಿತ್ರಗಳನ್ನು ಆಯ್ಕೆ ಮಾಡಿ. ಬೆಳಗಿನ ಪ್ರದರ್ಶನಗಳು ಮಗುವಿನ ನಿದ್ರೆಯ ಸಮಯಕ್ಕೆ ಅಡ್ಡಿಯಾಗುವುದಿಲ್ಲ.

ಗರ್ಭಾವಸ್ಥೆಯಲ್ಲಿ ಸಿನಿಮಾ ವೀಕ್ಷಣೆ ಸುರಕ್ಷಿತವೇ?

ಸಾಮಾನ್ಯವಾಗಿ ಗರ್ಭಿಣಿಯರು ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುವುದು ಸುರಕ್ಷಿತ, ಆದರೆ ಕೆಲವು ಪ್ರಮುಖ ಎಚ್ಚರಿಕೆಗಳನ್ನು ವಹಿಸುವುದು ಅಗತ್ಯ.

ಗರ್ಭದಲ್ಲಿರುವ ಮಗು ಸುಮಾರು 18 ರಿಂದ 24 ನೇ ವಾರದಿಂದ ಹೊರಗಿನ ಶಬ್ದಗಳನ್ನು ಆಲಿಸಲು ಪ್ರಾರಂಭಿಸುತ್ತದೆ. ಥಿಯೇಟರ್‌ನಲ್ಲಿರುವ ಅತಿಯಾದ ಶಬ್ದ ಮತ್ತು ಬೆಚ್ಚಿಬೀಳಿಸುವ ಸೌಂಡ್ ಇಫೆಕ್ಟ್‌ಗಳು ಮಗುವಿಗೆ ಅಸ್ವಸ್ಥತೆ ಉಂಟುಮಾಡಬಹುದು.

ಗರ್ಭಾವಸ್ಥೆಯ 2ನೇ ಮತ್ತು 3ನೇ ತ್ರೈಮಾಸಿಕದಲ್ಲಿ ಸುಧೀರ್ಘವಾಗಿ ಒಂದೇ ಕಡೆ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಕಾಲಿನ ರಕ್ತಸಂಚಲನೆಗೆ ತೊಂದರೆಯಾಗದಂತೆ, ನಡೆದಾಡಲು ಸುಲಭವಿರುವ ‘ಕಾರ್ನರ್’ ಸೀಟ್’ ಆಯ್ಕೆ ಮಾಡುವುದು ಒಳ್ಳೆಯದು.

ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನುನೋವು ಬರಬಹುದು. ಮದ್ಯಂತರ ಸಮಯದಲ್ಲಿ ಸ್ವಲ್ಪ ಹೊತ್ತು ಎದ್ದು ನಡೆದಾಡುವುದು ಉತ್ತಮ.

ಪ್ರಮುಖ ಸಲಹೆಗಳು

ಅತಿಯಾದ ಹೊಡೆದಾಟ, ಭಯಾನಕ ಸನ್ನಿವೇಶ ಮತ್ತು ಕರ್ಕಶ ಶಬ್ದವಿರುವ ಸಿನಿಮಾಗಳಿಗಿಂತ ಆಹ್ಲಾದಕರ ಹಾಗೂ ಕೌಟುಂಬಿಕ ಚಿತ್ರಗಳನ್ನು ಆಯ್ಕೆ ಮಾಡಿ.

ಹೊರಗಿನ ಆಹಾರಗಳಿಗಿಂತ ಮನೆಯಿಂದಲೇ ತಂದ ನೀರು ಮತ್ತು ತಿಂಡಿಗಳನ್ನು ಬಳಸಿ.

ಮಗು ಅತಿಯಾಗಿ ಅಳಲು ಪ್ರಾರಂಭಿಸಿದರೆ ಅಥವಾ ಗರ್ಭಿಣಿಯರಿಗೆ ಅಸ್ವಸ್ಥತೆ ಎನಿಸಿದರೆ ತಕ್ಷಣವೇ ಹೊರಗೆ ಬರಲು ಹಿಂಜರಿಯಬೇಡಿ.

ಸಿನಿಮಾ ಎನ್ನುವುದು ಮನರಂಜನೆಯ ಅದ್ಭುತ ಮಾಧ್ಯಮ. ಆದರೆ, ಮನೆಗೆ ಬರಲಿರುವ ಪುಟ್ಟ ಮಗುವಿನ ಆರೋಗ್ಯ ಹಾಗೂ ಬೆಳೆಯುತ್ತಿರುವ ಮಕ್ಕಳ ಮಾನಸಿಕ ಸುರಕ್ಷತೆ ಪ್ರತಿಯೊಬ್ಬ ಪೋಷಕರ ಮೊದಲ ಆದ್ಯತೆಯಾಗಬೇಕು.

Must Read