ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ನ ಅತ್ಯಂತ ವೇಗದ ಹಾಗೂ ರೋಚಕ ಸ್ವರೂಪಗಳಲ್ಲಿ ಒಂದಾದ ಹಾಂಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. IPLನಲ್ಲಿ ಮಿಂಚಿರುವ ಹಲವು ಆಟಗಾರರ ಸೇರ್ಪಡೆಯಿಂದ ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ತಂಡದಲ್ಲಿ ಸ್ಥಾನ ಪಡೆದವರ್ಯಾರು?
ತಂಡದಲ್ಲಿ ಕ್ರುನಾಲ್ ಪಾಂಡ್ಯ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಮತ್ತು ಟಿ. ನಟರಾಜನ್ ಸ್ಥಾನ ಪಡೆದಿದ್ದಾರೆ. IPLನಲ್ಲಿ ವಿವಿಧ ಫ್ರಾಂಚೈಸಿಗಳ ಪರ ಮಿಂಚಿರುವ ಈ ಆಟಗಾರರು ತಮ್ಮ ಅನುಭವವನ್ನು ಹಾಂಕಾಂಗ್ ಸಿಕ್ಸಸ್ನಲ್ಲೂ ಪ್ರದರ್ಶಿಸುವ ನಿರೀಕ್ಷೆಯಿದೆ.
ಮೈದಾನಕ್ಕಿಳಿಯುವವರು ಆರು ಮಂದಿ ಮಾತ್ರ
ಸಿಕ್ಸಸ್ ಮಾದರಿಯಲ್ಲಿ ಮೈದಾನಕ್ಕಿಳಿಯುವ ಆಟಗಾರರ ಸಂಖ್ಯೆ ಕೇವಲ ಆರು. ಹೀಗಾಗಿ ಬ್ಯಾಟಿಂಗ್ನಲ್ಲಿ ಸ್ಫೋಟಕ ಹೊಡೆತಗಳು, ವೇಗದ ರನ್ಗಳ ಓಟ ಹಾಗೂ ಬೌಲಿಂಗ್ನಲ್ಲಿ ತಕ್ಷಣದ ಪರಿಣಾಮ ಬೀರುವ ಸಾಮರ್ಥ್ಯವೇ ಗೆಲುವಿನ ಪ್ರಮುಖ ಅಸ್ತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಅನುಭವ ಮತ್ತು ಆಕ್ರಮಣಕಾರಿ ಆಟದ ಸಂಯೋಜನೆಯೊಂದಿಗೆ ಭಾರತ ತಂಡವನ್ನು ಕಟ್ಟಲಾಗಿದೆ.
ನಾಯಕ ಭುವನೇಶ್ವರ್ ಕುಮಾರ್ ಹೊಸ ಚೆಂಡಿನೊಂದಿಗೆ ಎದುರಾಳಿಗಳಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದ್ದರೆ, ಕ್ರುನಾಲ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಸಮತೋಲನ ನೀಡಲಿದ್ದಾರೆ. ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ವೇಗದ ಬ್ಯಾಟಿಂಗ್ಗೆ ಬಲ ತುಂಬಲಿದ್ದು, ತೆವಾಟಿಯಾ ಮತ್ತು ಶಶಾಂಕ್ ಸಿಂಗ್ ಅಂತಿಮ ಹಂತದಲ್ಲಿ ದೊಡ್ಡ ಹೊಡೆತಗಳ ಮೂಲಕ ಪಂದ್ಯವನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಎಡಗೈ ವೇಗಿ ಟಿ. ನಟರಾಜನ್ ಬೌಲಿಂಗ್ ವಿಭಾಗದಲ್ಲಿದ್ದಾರೆ.
ಇದನ್ನೂ ಓದಿ:
2025ರ ಆವೃತ್ತಿಯಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಎರಡು ರನ್ಗಳ ರೋಚಕ ಜಯದೊಂದಿಗೆ ಅಭಿಯಾನ ಆರಂಭಿಸಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು. ಈ ಬಾರಿ ಆ ತಪ್ಪುಗಳನ್ನು ಸರಿಪಡಿಸಿ ಇನ್ನಷ್ಟು ದೂರ ಸಾಗುವ ಗುರಿ ಭಾರತದ ಮುಂದಿದೆ.
ಇತ್ತ ಕಳೆದ ಆವೃತ್ತಿಯ ಚಾಂಪಿಯನ್ ಪಾಕಿಸ್ತಾನ ತನ್ನ ಆರನೇ ಪ್ರಶಸ್ತಿಯೊಂದಿಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ. 2026ರ ಟೂರ್ನಿಯಲ್ಲಿ ಪ್ರಮುಖ ಎಂಟು ಕ್ರಿಕೆಟ್ ರಾಷ್ಟ್ರಗಳ ಜೊತೆಗೆ ನಾಲ್ಕು ಅಸೋಸಿಯೇಟ್ ತಂಡಗಳು ಭಾಗವಹಿಸಲಿವೆ.



