October 6, 2026
Tuesday, October 6, 2026
spot_img

15 ವರುಷಗಳ ಬಳಿಕ ಮತ್ತೆ ಒಂದಾದ ಸೂಪರ್ ಹಿಟ್ ಜೋಡಿ: ‘ಕಿಂಗ್’ ಅಂಗಳಕ್ಕೆ ಎಂಟ್ರಿ ಕೊಟ್ಟ ‘ಬೇಬೋ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಬಾದ್‌ಷಾ ಶಾರುಖ್ ಖಾನ್ ಅಭಿನಯದ ಅತ್ಯಂತ ನಿರೀಕ್ಷಿತ ಆಕ್ಷನ್ ಎಂಟರ್‌‌ಟೇನರ್ ‘ಕಿಂಗ್’ ಸಿನಿಮಾದಿಂದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ. ಸುಮಾರು 15 ವರ್ಷಗಳ ಸುದೀರ್ಘ ವಿರಾಮದ ನಂತರ ಬಾಲಿವುಡ್‌ನ ಬೇಬೋ ನಟಿ ಕರೀನಾ ಕಪೂರ್ ಖಾನ್ ಮತ್ತು ಶಾರುಖ್ ಖಾನ್ ಮತ್ತೆ ಒಂದಾಗುತ್ತಿದ್ದಾರೆ. ‘ಕಿಂಗ್’ ಚಿತ್ರದ ವಿಶೇಷ ಹಾಡೊಂದರಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಲ್ಲಿ ಈ ಸುದ್ದಿ ಕುತೂಹಲ ಮೂಡಿಸಿದೆ.

ಈ ವಿಶೇಷ ಹಾಡಿಗೆ ‘ಡ್ಯಾಡಿ ಕೂಲ್’ ಎಂದು ಹೆಸರಿಡಲಾಗಿದ್ದು, ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಹಾಡಿನ ಶೂಟಿಂಗ್ ನಡೆಯಲಿದ್ದು, ಕರೀನಾ ಕಪೂರ್ ಸುಮಾರು 5 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಶಾರುಖ್ ಮತ್ತು ಕರೀನಾ ಜೋಡಿಯನ್ನು ಪ್ರೇಕ್ಷಕರು ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಈ ಹಾಡಿನಲ್ಲಿ ಕಣ್ತುಂಬಿಕೊಳ್ಳಬಹುದು.

ಸಂಗೀತ ನಿರ್ದೇಶಕರಾದ ಸಚಿನ್-ಜಿಗರ್ ಈ ಹಾಡಿಗೆ ಟ್ಯೂನ್ ಹಾಕುತ್ತಿದ್ದು, ಭಾರತೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕಲಾವಿದರ ಸಹಯೋಗದಲ್ಲಿ ಈ ಹಾಡು ಮೂಡಿಬರುತ್ತಿದೆ. ಈ ವರ್ಷದ ಅತಿ ದೊಡ್ಡ ಹಿಟ್ ಸಾಂಗ್ ಆಗಿ ಇದನ್ನು ರೂಪಿಸಲು ಚಿತ್ರತಂಡ ಯೋಜನೆ ರೂಪಿಸಿದ್ದು, ಗಾಯಕರ ವಿವರಗಳನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ.

ನವೆಂಬರ್ 2 ರಂದು ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ‘ಕಿಂಗ್’ ಬಳಗದಿಂದ ಹೊಸ ಝಲಕ್ ಅಥವಾ ಬಿಗ್‌ ಅಪ್‌ಡೇಟ್ ಹೊರಬರಲಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಹಾಗೂ ಗೌರಿ ಖಾನ್, ಸಿದ್ಧಾರ್ಥ್ ಆನಂದ್ ಮತ್ತು ಮಮತಾ ಆನಂದ್ ನಿರ್ಮಾಣದ ಈ ಚಿತ್ರದಲ್ಲಿ ಸುಹಾನಾ ಖಾನ್, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಜಾಕಿ ಶ್ರಾಫ್, ರಾಣಿ ಮುಖರ್ಜಿ ಮತ್ತು ಜೈದೀಪ್ ಅಹ್ಲಾವತ್ ಅವರಂತಹ ದಿಗ್ಗಜ ತಾರಾಗಣವಿದೆ. ಒಟ್ಟಿನಲ್ಲಿ ‘ಡ್ಯಾಡಿ ಕೂಲ್’ ಹಾಡಿನ ಮೂಲಕ ‘ಕಿಂಗ್’ ಸಿನಿಮಾ ಬೆಳ್ಳಿಪರದೆಯ ಮೇಲೆ ಹೊಸ ಸಂಚಲನ ಸೃಷ್ಟಿಸುವುದು ಖಚಿತ.

Must Read