October 6, 2026
Tuesday, October 6, 2026
spot_img

ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟದ ರಣಕಹಳೆ: ರಾಹುಲ್–ಪ್ರಿಯಾಂಕಾ ಪ್ರತಿಭಟನೆ, ಸಿಇಸಿ ರಾಜೀನಾಮೆಗೆ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಸ್‌ಐಆರ್ ಹಾಗೂ ಫಾರ್ಮ್‌-6 ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟದ ನಾಯಕರು ಮಂಗಳವಾರ ಸಂಸತ್‌ನಿಂದ ಚುನಾವಣಾ ಆಯೋಗದ ಕಚೇರಿಯತ್ತ ನಡೆಸಿದ ಪ್ರತಿಭಟನಾ ಮೆರವಣಿಗೆ ಹೈಡ್ರಾಮಾಗೆ ಸಾಕ್ಷಿಯಾಯಿತು.

ರಸ್ತೆಯಲ್ಲೇ ಧರಣಿ ನಡೆಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ವಿರೋಧ ಪಕ್ಷಗಳ ಸಂಸದರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಂಸತ್ ಮಾರ್ಗದ ಬಳಿ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದ ಹಿನ್ನೆಲೆಯಲ್ಲಿ ನಾಯಕರು ರಸ್ತೆಯಲ್ಲೇ ಧರಣಿ ನಡೆಸಿದರು. ಈ ವೇಳೆ ರಾಹುಲ್ ಗಾಂಧಿ ಹಾಗೂ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಪೊಲೀಸ್ ಬ್ಯಾರಿಕೇಡ್ ಏರಿದರೆ, ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಬಳಿಕ ಅವರು ಬಸ್‌ನಿಂದ ಇಳಿದು ಸಹೋದರ ರಾಹುಲ್ ಜೊತೆ ಸೇರಿಕೊಂಡರು.

ನಂತರ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ದೀಪೇಂದರ್ ಹೂಡಾ ಅವರು ಆಕಾಶವಾಣಿ ಭವನದ ಪ್ರವೇಶ ದ್ವಾರದ ಮೂಲಕ ಒಳಗೆ ಪ್ರವೇಶಿಸಿ ಕೆಲಕಾಲ ಮರದ ಕೆಳಗೆ ಕುಳಿತು ಪ್ರತಿಭಟನೆ ಮುಂದುವರಿಸಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ನಾಯಕರಾದ ಡೆರೆಕ್ ಒ’ಬ್ರಿಯಾನ್, ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ವಿರೋಧ ಪಕ್ಷದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು.

ವೋಟ್ ಚೋರ್, ಗದ್ದಿ ಛೋಡ್

ಪ್ರತಿಭಟನಾಕಾರರು ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಕೆಲವರು ಜ್ಞಾನೇಶ್ ಕುಮಾರ್ ಅವರನ್ನು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿ ಚಿತ್ರಿಸಿರುವ ಕಟ್‌ಔಟ್‌ಗಳನ್ನು ಪ್ರದರ್ಶಿಸಿದರು. “ವೋಟ್ ಚೋರ್, ಗದ್ದಿ ಛೋಡ್” ಸೇರಿದಂತೆ ಘೋಷಣೆಗಳು ಪ್ರತಿಭಟನಾ ಸ್ಥಳದಲ್ಲಿ ಮೊಳಗಿದವು. ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಜ್ಞಾನೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

ಫಾರ್ಮ್‌-6ಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಅವಲೋಕನಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು, ಚುನಾವಣಾ ಆಯೋಗದ ಕ್ರಮಗಳ ಬಗ್ಗೆ ಪ್ರಶ್ನೆ ಎತ್ತಿವೆ. ಹೆಚ್ಚುವರಿ ಘೋಷಣೆಯನ್ನು ಫಾರ್ಮ್‌-6ಗೆ ಲಗತ್ತಿಸಿರುವುದು ಹಾಗೂ ಅದರ ಅನುಮೋದನೆ ಕುರಿತ ವಿಚಾರವನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂಬುದನ್ನು ವಿರೋಧ ಪಕ್ಷಗಳು ತಮ್ಮ ಆಕ್ಷೇಪಣೆಗೆ ಆಧಾರವಾಗಿಸಿಕೊಂಡಿವೆ.

ಆದರೆ ಚುನಾವಣಾ ಆಯೋಗವು ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಹೇಳಿದ್ದು, ಆಯೋಗದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದೆ.

Must Read