October 6, 2026
Tuesday, October 6, 2026
spot_img

ಗ್ರಾಹಕನ ಜೇಬಿಗೆ ಕತ್ತರಿ: ಹಾಲಿನ ದರ ಏರಿಕೆಗೆ ಅಸ್ತು ಎಂದ ಸರ್ಕಾರ: ಲೀಟರ್‌ಗೆ 8 ರೂ. ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಜನರಿಗೆ ನಂದಿನಿ ಹಾಲಿನ ದರ ಏರಿಕೆಯ ಬಿಸಿ ತಟ್ಟುವುದು ಬಹುತೇಕ ಖಚಿತವಾಗಿದೆ. ರಾಜ್ಯ ಸಚಿವ ಸಂಪುಟವು ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 8 ಹೆಚ್ಚಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಹೊಸ ದರ ನವೆಂಬರ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದ್ದು, ದರ ಏರಿಕೆಯ ಹಣದಲ್ಲಿ ಹೆಚ್ಚಿನ ಪಾಲು ಹಾಲು ಉತ್ಪಾದಕರಿಗೆ ನೀಡಲು ಸರ್ಕಾರ ನಿರ್ಧರಿಸಿದೆ.

ಆದರೆ ಅಂತಿಮ ಜಾರಿಗೆ ಚುನಾವಣಾ ಆಯೋಗದ ಅನುಮತಿ ಅಗತ್ಯವಾಗಿರುವುದರಿಂದ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ.

8ರೂ ದರ ಏರಿಕೆಯಲ್ಲಿ 6 ರೂ ನೇರವಾಗಿ ರೈತರಿಗೆ ಹಾಗೂ 2 ರೂ ಹಾಲು ಒಕ್ಕೂಟಗಳಿಗೆ ನೀಡುವ 80:20 ಅನುಪಾತವನ್ನು ಸರ್ಕಾರ ಅನುಸರಿಸಲು ನಿರ್ಧರಿಸಿದೆ ಎನ್ನಲಾಗಿದೆ. ಹಾಲು ಒಕ್ಕೂಟಗಳು 70:30 ಅನುಪಾತವನ್ನು ಕೋರಿದ್ದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ಹೆಚ್ಚಿನ ಪಾಲು ಸಿಗುವ 80:20 ಮಾದರಿಯ ಪರವಾಗಿ ನಿಲುವು ವ್ಯಕ್ತಪಡಿಸಿದ್ದರು. ಹೀಗಾಗಿ ಹೊಸ ದರ ಜಾರಿಯಾದರೆ ಪ್ರತಿ ಲೀಟರ್‌ಗೆ ಹೆಚ್ಚುವರಿ 8 ರೂನಲ್ಲಿ ರೈತರಿಗೆ 6 ರೂ ತಲುಪಲಿದೆ.

ಹೊಸ ರೇಟ್ ಹೇಗಿದೆ?

ದರ ಪರಿಷ್ಕರಣೆಯ ಬಳಿಕ ಟೋನ್ಡ್ ಹಾಲು 46ರಿಂದ 54ಕ್ಕೆ, ಹೋಮೋಜಿನೈಸ್ಡ್ ಟೋನ್ಡ್ ಹಾಲು 47ರಿಂದ 55ಕ್ಕೆ ಹಾಗೂ ಹಸುವಿನ ಹಾಲು 50ರಿಂದ 58ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:

ಹಾಲಿನ ದರ ಏರಿಕೆ ಜಾರಿಗೆ ಬಂದರೆ ಪ್ರತಿದಿನ ಹಾಲು ಖರೀದಿಸುವ ಕುಟುಂಬಗಳ ಮಾಸಿಕ ಖರ್ಚಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಲಿನ ಬೆಲೆ ಹೆಚ್ಚಾದರೆ ಮೊಸರು, ಮಜ್ಜಿಗೆ, ಚಹಾ, ಕಾಫಿ ಸೇರಿದಂತೆ ಹಲವು ದಿನನಿತ್ಯದ ಬಳಕೆಯ ಮೇಲೂ ಪರೋಕ್ಷ ಪರಿಣಾಮ ಬೀರುವ ಆತಂಕವಿದೆ.

ಬಸ್‌ಗಳ ಪ್ರಯಾಣ ದರ ಹೆಚ್ಚಿಸಲು ಅನುಮೋದನೆ

ಇದರ ಬೆನ್ನಲ್ಲೇ ರಾಜ್ಯದ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನೂ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಎರಡೂ ನಿರ್ಧಾರಗಳ ಅಧಿಕೃತ ಘೋಷಣೆಯನ್ನು ತಕ್ಷಣ ಮಾಡದೆ, ಚುನಾವಣಾ ಆಯೋಗದ ಅನುಮತಿಗಾಗಿ ಸರ್ಕಾರ ಕಾಯುತ್ತಿದೆ.

ಹಾಲಿನ ದರ ಏರಿಕೆ ಮೊದಲು ಗ್ರಾಹಕರ ಜೇಬಿಗೆ ಹೊರೆ ತಂದರೆ, ಬಸ್ ದರ ಹೆಚ್ಚಳ ಜಾರಿಗೆ ಬಂದ ಬಳಿಕ ಪ್ರತಿದಿನದ ಪ್ರಯಾಣ ವೆಚ್ಚವೂ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಚುನಾವಣಾ ಆಯೋಗದ ಅನುಮತಿ ಮತ್ತು ಸರ್ಕಾರದ ಅಂತಿಮ ಘೋಷಣೆಯತ್ತ ರಾಜ್ಯದ ಜನರ ಗಮನ ನೆಟ್ಟಿದೆ.

Must Read