November 22, 2026
Sunday, November 22, 2026
spot_img

ವಾರಾಂತ್ಯದಲ್ಲೂ ಇಳಿದ ಬಂಗಾರದ ದರ: ಖರೀದಿದಾರರ ಮುಖದಲ್ಲಿ ಮಂದಹಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಾಂತ್ಯದಲ್ಲೂ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲೇ ಸಾಗಿದ್ದು, ಕಳೆದ ಒಂದು ವಾರದಲ್ಲಿ ಬರೋಬ್ಬರಿ 1,075 ರೂಪಾಯಿಗಳಷ್ಟು ಕುಸಿತ ಕಂಡಿದೆ. ಒಂದು ವಾರದ ಹಿಂದೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ 12,540 ರೂಪಾಯಿ ಇತ್ತು. ಆದರೆ ಈಗ ಅದು 11,465 ರೂಪಾಯಿಗೆ ಇಳಿದಿದೆ. ಮದುವೆ, ಹಬ್ಬ ಅಥವಾ ಇತರ ಶುಭಕಾರ್ಯಗಳಿಗೆ ಚಿನ್ನ ಕೊಳ್ಳುವ ಯೋಚನೆಯಲ್ಲಿದ್ದವರಿಗೆ ಈ ಬೆಲೆ ಇಳಿಕೆ ತುಸು ಸಮಾಧಾನ ತಂದಿದೆ.

ದೇಶೀಯ ಮಾರುಕಟ್ಟೆಯಂತೆಯೇ ವಿದೇಶಿ ಮಾರುಕಟ್ಟೆಯಲ್ಲೂ ಬಂಗಾರದ ದರ ಗಣನೀಯವಾಗಿ ತಗ್ಗಿದೆ. ಹಲವು ದೇಶಗಳಲ್ಲಿ ಅಪರಂಜಿ ಚಿನ್ನದ ಬೆಲೆ 11,000 ರೂಪಾಯಿ ಒಳಗೆ ಇಳಿದಿರುವುದು ಗಮನಾರ್ಹವಾಗಿದೆ. ಇದರ ಜೊತೆಗೆ ಎಂಸಿಎಕ್ಸ್ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಇಳಿದಿದ್ದು, ಜಾಗತಿಕ ಮಟ್ಟದ ಬದಲಾವಣೆಗಳು ನೇರವಾಗಿ ದರದ ಮೇಲೆ ಪರಿಣಾಮ ಬೀರಿವೆ.

ಭಾರತದ ಮಾರುಕಟ್ಟೆಯಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,14,650 ರೂಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,25,080 ರೂಪಾಯಿ ಆಗಿದೆ. ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದ್ದು, 10 ಗ್ರಾಂ ಚಿನ್ನಕ್ಕೆ 1,14,650 ರೂಪಾಯಿ ನಿಗದಿಯಾಗಿದೆ.

ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲೂ ಗಮನಾರ್ಹ ಚಿತ್ರಣ ಕಾಣುತ್ತಿದೆ. 100 ಗ್ರಾಂ ಬೆಳ್ಳಿ ಬೆಲೆ 17,500 ರೂಪಾಯಿ ಇದೆ. ಬೆಂಗಳೂರು ಸೇರಿದಂತೆ ತಮಿಳುನಾಡು ಮತ್ತು ಕೇರಳದಲ್ಲೂ 100 ಗ್ರಾಂ ಬೆಳ್ಳಿಯ ಬೆಲೆ 17,500 ರೂಪಾಯಿಯಲ್ಲೇ ಇದೆ. ಒಟ್ಟಿನಲ್ಲಿ, ಸತತ ಇಳಿಕೆಯಿಂದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಈಗ ಖರೀದಿದಾರರ ಗಮನ ಸೆಳೆಯುತ್ತಿದೆ.

Must Read

Skip to toolbar