October 7, 2026
Wednesday, October 7, 2026
spot_img

‘ದೃಶ್ಯಂ-3’ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್: ಟಿಕೆಟ್ ಡಿಸ್ಕೌಂಟ್ ಇಲ್ದೇ ಇದ್ರೂ ಭರ್ಜರಿ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ-3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಂಗಳವಾರ ಒಂದೇ ದಿನ ಸುಮಾರು 18.25 ಕೋಟಿ ಗಳಿಕೆ ಕಾಣುವ ಮೂಲಕ ಚಿತ್ರದ ಒಟ್ಟು ಕಲೆಕ್ಷನ್ 210 ಕೋಟಿ ಗಡಿಯನ್ನು ಯಶಸ್ವಿಯಾಗಿ ದಾಟಿದೆ. ಪ್ರಸ್ತುತ ಗಳಿಕೆಯ ವೇಗವನ್ನು ನೋಡಿದರೆ, ಸಿನಿಮಾ ತನ್ನ ಮೊದಲ ವಾರದ ಅಂತ್ಯಕ್ಕೆ ಭರ್ಜರಿ 235 ಕೋಟಿ ಬಾಚಿಕೊಳ್ಳುವ ನಿರೀಕ್ಷೆಯಿದೆ.

ಸಾಮಾನ್ಯವಾಗಿ ವಾರದ ಮಧ್ಯದಲ್ಲಿ ಚಿತ್ರಮಂದಿರಗಳು ಟಿಕೆಟ್ ದರದಲ್ಲಿ ರಿಯಾಯಿತಿ ನೀಡುತ್ತವೆ. ಆದರೆ ದೊಡ್ಡ ಬಜೆಟ್ ಮತ್ತು ತೀವ್ರ ಕ್ರೇಜ್ ಇರುವ ಸಿನಿಮಾಗಳಿಗೆ ಯಾವುದೇ ಡಿಸ್ಕೌಂಟ್ ನೀಡದಿದ್ದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ‘ದೃಶ್ಯಂ-3’ ಚಿತ್ರದ ವಿಷಯದಲ್ಲೂ ಇದೇ ಆಗಿದೆ. ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಕೇವಲ 5 ಪ್ರತಿಶತ ಮಾತ್ರ ಗಳಿಕೆ ಕಡಿಮೆಯಾಗಿದ್ದು, ಇದು ಸಿನಿಮಾ ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನೆಲೆಯೂರಿರುವುದಕ್ಕೆ ಸಾಕ್ಷಿಯಾಗಿದೆ. ಡಿಸ್ಕೌಂಟ್ ಇಲ್ಲದ ಕಾರಣ, ಪ್ರೇಕ್ಷಕರ ಸಂಖ್ಯೆ ಹೆಚ್ಚಾದಂತೆಲ್ಲಾ ಆ ಆದಾಯ ನೇರವಾಗಿ ಬಾಕ್ಸ್ ಆಫೀಸ್ ಗಳಿಕೆಯನ್ನು ಹೆಚ್ಚಿಸಿದೆ.

ಮಂಗಳವಾರ ಡಿಸ್ಕೌಂಟ್ ಇಲ್ಲದಿದ್ದರೂ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ.. ಪ್ರಸ್ತುತ ಬುಧವಾರದ ಮುಂಗಡ ಟಿಕೆಟ್ ಬುಕಿಂಗ್ ಅಂಕಿಅಂಶಗಳನ್ನು ಗಮನಿಸಿದರೆ ಗಳಿಕೆಯಲ್ಲಿ ತುಸು ಇಳಿಕೆಯಾಗುವ ಸೂಚನೆಗಳು ಕಾಣಿಸುತ್ತಿವೆ.

ಬುಧವಾರದ ದಿನದ ಅಂತ್ಯಕ್ಕೆ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂಬುದು ‘ದೃಶ್ಯಂ-3’ ನ ಅಂತಿಮ ಬಾಕ್ಸ್ ಆಫೀಸ್ ಭವಿಷ್ಯವನ್ನು ನಿರ್ಧರಿಸಲಿದೆ. ಏನೇ ಆದರೂ, ಕೇವಲ ಐದೇ ದಿನಗಳಲ್ಲಿ 210 ಕೋಟಿ ಗಳಿಸಿರುವ ಈ ಸಿನಿಮಾ, ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವತ್ತ ಹೆಜ್ಜೆ ಇಡುತ್ತಿರುವುದಂತೂ ಖಚಿತ.

Must Read