October 7, 2026
Wednesday, October 7, 2026
spot_img

Be Aware | ಮಗುವಿನ ಮೇಲೆ ಬಿಸಿ ಹಾಲು/ನೀರು ಚೆಲ್ಲಿದಾಗ ಈ ತಪ್ಪುಗಳನ್ನು ಮಾಡಬೇಡಿ, ತಕ್ಷಣ ಈ ಪ್ರಥಮ ಚಿಕಿತ್ಸೆ ನೀಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯಲ್ಲಿ ಸಣ್ಣ ಮಕ್ಕಳಿದ್ದಾಗ ಪ್ರತಿಯೊಂದು ಕ್ಷಣವೂ ಎಚ್ಚರಿಕೆ ಅಗತ್ಯ. ಆಟವಾಡುತ್ತಾ ಅಥವಾ ಆಕಸ್ಮಿಕವಾಗಿ ಕಾದ ಹಾಲು, ಟೀ ಅಥವಾ ಕುದಿಯುವ ನೀರು ಮಗುವಿನ ಮೈಮೇಲೆ ಚೆಲ್ಲಿದರೆ, ಆ ಕ್ಷಣದಲ್ಲಿ ಪೋಷಕರು ಗಾಬರಿಯಾಗುವುದು ಸಹಜ. ಆದರೆ, ಗಾಬರಿಯಲ್ಲಿ ಮಾಡುವ ಸಣ್ಣ ತಪ್ಪು ಮಗುವಿನ ಚರ್ಮಕ್ಕೆ ಹೆಚ್ಚಿನ ಹಾನಿ ಉಂಟುಮಾಡಬಹುದು. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಪೋಷಕರೂ ತಿಳಿದುಕೊಳ್ಳಬೇಕಾದ ಮುಖ್ಯ ಪ್ರಥಮ ಚಿಕಿತ್ಸೆ ಇಲ್ಲಿದೆ.

ತಕ್ಷಣ ಏನು ಮಾಡಬೇಕು?

ಬಿಸಿ ನೀರು ಬಿದ್ದ ತಕ್ಷಣ, ಆ ಜಾಗದ ಮೇಲೆ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ತಣ್ಣೀರನ್ನು ಸುರಿಯಿರಿ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಿ, ರಕ್ತನಾಳಗಳ ಆಳಕ್ಕೆ ಕಾವು ಇಳಿಯದಂತೆ ತಡೆಯುತ್ತದೆ.

ಕಾದ ನೀರು ಬಿದ್ದ ಜಾಗದಲ್ಲಿದ್ದ ಬಟ್ಟೆಯನ್ನು ತಕ್ಷಣವೇ ಮೆಲ್ಲನೆ ತೆಗೆಯಿರಿ. ಬಟ್ಟೆ ಚರ್ಮಕ್ಕೆ ಅಂಟಿಕೊಂಡಿದ್ದರೆ ಬಲವಂತವಾಗಿ ಎಳೆಯಬೇಡಿ. ಬಟ್ಟೆಯ ಸುತ್ತಲಿನ ಭಾಗವನ್ನು ಕತ್ತರಿಸಿ.

ಮಗುವಿನ ಕತ್ತಿನಲ್ಲಿದ್ದ ಸರ, ಕೈಯಲ್ಲಿದ್ದ ಬಳೆ ಅಥವಾ ಕಾಲುಚೈನ್ ಇದ್ದರೆ ತಕ್ಷಣ ತೆಗೆಯಿರಿ, ಏಕೆಂದರೆ ಸುಟ್ಟ ಗಾಯವಾದಾಗ ಆ ಭಾಗ ಬೇಗನೆ ಊದಿಕೊಳ್ಳುತ್ತದೆ.

ಇವುಗಳನ್ನು ಮಾಡಬೇಡಿ

ಗಾಯದ ಮೇಲೆ ನೇರವಾಗಿ ಐಸ್ ಇಡುವುದರಿಂದ ಜೀವಕೋಶಗಳು ಇನ್ನಷ್ಟು ಹಾನಿಗೊಳಗಾಗುತ್ತವೆ.

ಗಾಯದ ಮೇಲೆ ಟೂತ್‌ಪೇಸ್ಟ್, ಎಣ್ಣೆ, ಅರಿಶಿಣ ಹಚ್ಚಬೇಡಿ. ಇವು ಸೋಂಕಿಗೆ ದಾರಿ ಮಾಡಿಕೊಡುತ್ತವೆ.

ಬಿಸಿ ನೀರು ಬಿದ್ದಾಗ ಏಳುವ ನೀರುಗುಳ್ಳೆಗಳನ್ನು ತಪ್ಪಿಯೂ ಒಡೆಯಬೇಡಿ. ಅದು ಚರ್ಮಕ್ಕೆ ರಕ್ಷಣೆ ನೀಡುವ ನೈಸರ್ಗಿಕ ಪದರ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಮಗುವಿನ ಮುಖ, ಕೈ, ಜನನಾಂಗ ಅಥವಾ ದೊಡ್ಡ ಭಾಗಕ್ಕೆ ಗಾಯವಾಗಿದ್ದರೆ ತಕ್ಷಣ ವೈದ್ಯರ ಬಳಿ ಕರೆದೊಯ್ಯಿರಿ. ಗಾಯದ ಭಾಗ ಕಪ್ಪಾಗಿದ್ದರೆ ಅಥವಾ ಮಗು ವಿಪರೀತ ಅಳುತ್ತಿದ್ದರೆ ತಡಮಾಡದೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ. ಸರಿಯಾದ ಸಮಯದಲ್ಲಿ ನೀಡುವ ಸರಳ ಪ್ರಥಮ ಚಿಕಿತ್ಸೆಯು ಮಗುವನ್ನು ದೊಡ್ಡ ಮಟ್ಟದ ಗಾಯ ಹಾಗೂ ಕಲೆಗಳಿಂದ ರಕ್ಷಿಸುತ್ತದೆ.

Must Read