October 7, 2026
Wednesday, October 7, 2026
spot_img

ಎಲ್ಲ ಅನುಭವಗಳನ್ನು ದೇಶಸೇವೆಗೆ ಧಾರೆ ಎರೆಯುತ್ತೇನೆ: ಪ್ರಧಾನಿ ಮೋದಿ ಭಾವುಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಮುಂಜಾನೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತೆರಳಿದ್ದೆ. ಕಣ್ಣನ್ನು ಮುಚ್ಚಿ ವಿಘ್ನ ವಿನಾಯಕನ ಬಳಿ ʼನನ್ನಲ್ಲಿ ಕಲಿಯುವ ಆಸಕ್ತಿಯನ್ನು ಎಂದಿಗೂ ಕಡಿಮೆಯಾಗಲು ಬಿಡಬೇಡ. ನಾನು ಎಷ್ಟು ಕಲಿಯುತ್ತೇನೋ ಅಷ್ಟೂ ಅನುಭವವನ್ನು ದೇಶಸೇವೆಗಾಗಿ ಧಾರೆ ಎರೆಯುತ್ತೇನೆʼ ಎಂದು ಪ್ರಾರ್ಥನೆ ಮಾಡಿಕೊಂಡೆ..

ಸಾಂವಿಧಾನಿಕ ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಸುದೀರ್ಘ ಸೇವಾವಧಿಯನ್ನು ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ಹೃದಯತುಂಬಿದ ಮಾತುಗಳಿವು.. ಹೌದು, ಇಂದು ದೆಹಲಿಯ ಇಂದಿರಾ ಗಾಂಧಿ ಇಂಡೋರ್‌ ಸ್ಟೇಡಿಯಂನಲ್ಲಿ ನಡೆದ ಸೇವಾ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಈ ಹಿಂದೆ ಸಂಕಷ್ಟ ಬಂದರೆ ದೇಶವೇ ನಲುಗುತ್ತಿತ್ತು. ಆದರೆ ಇದೀಗ ಸಂಕಷ್ಟ ಬಂದರೆ ಭಾರತದ ಆಂತರಿಕ ಶಕ್ತಿ ಮತ್ತು ನಮ್ಮ ಆಡಳಿತ ನೀತಿಗಳ ಬಗ್ಗೆ ಇಡೀ ವಿಶ್ವವೇ ಚರ್ಚಿಸುತ್ತಿದೆ. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಜನರೇ ಕಾರಣ. ಜನತೆಯೇ ಜನಾರ್ದನ ಎನ್ನುವ ಮಾತು ನನ್ನಮನಸ್ಸಿನಲ್ಲಿ ಇದ್ದೇ ಇದೆ. ಕೋಟ್ಯಂತರ ನಾಗರಿಕರ ಅಚಲ ವಿಶ್ವಾಸ ಮತ್ತು ಲಕ್ಷಾಂತರ ನಿಸ್ವಾರ್ಥ ಕಾರ್ಯಕರ್ತರ ಪರಿಶ್ರಮವೇ ನನ್ನ ಅತಿ ದೊಡ್ಡ ಶಕ್ತಿ. ದೇಶ ನನಗೆ ಎಲ್ಲವನ್ನೂ ನೀಡಿದೆ, ಹೀಗಾಗಿ ನಾನು ದೇಶಕ್ಕೆ ಸಂಪೂರ್ಣ ಉತ್ತರದಾಯಿಯಾಗಿದ್ದೇನೆ ಎಂದರು.

ನನ್ನ ಜೀವನದಲ್ಲಿ ಸಿಕ್ಕಿರುವ ಒಂದು ಅನುಭವವನ್ನೂ ನಾನು ಕಹಿ ಎಂದೋ ವ್ಯರ್ಥವೆಂದೋ ಅಂದುಕೊಂಡವನೇ ಅಲ್ಲ. ನನ್ನನ್ನು ಎಷ್ಟು ಬಾರಿ ಕೆಡವಲು ಪ್ರಯತ್ನಿಸಿದರೂ ಮತ್ತೆ ಪುಟಿದು ನಿಲ್ಲುತ್ತೇನೆಟೀಕಾಕಾರರಿಂದ ಆತ್ಮವಿಮರ್ಶೆಯನ್ನು, ವಿರೋಧಿಗಳಿಂದ ಪ್ರಜಾಪ್ರಭುತ್ವದ ಅಸಲಿ ಶಕ್ತಿಯನ್ನು ಹಾಗೂ ಕೊರೊನಾ ಮಹಾಮಾರಿಯಿಂದ ಸದಾ ಸನ್ನದ್ಧವಾಗಿರುವುದನ್ನು ಕಲಿತಿದ್ದೇನೆ ಎಂದು ತಿಳಿಸಿದರು.

Must Read