ಹೊಸದಿಗಂತ ವರದಿ ಬಳ್ಳಾರಿ:
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಸೇರಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿರುವುದು ಅತ್ಯಂತ ಖಂಡನಿಯ, ಕಾನೂನು ಬಾಹಿರ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಾಲಿಕೆ ಪ್ರತಿಪಕ್ಷದ ನಾಯಕ ಶ್ರೀನಿವಾಸ್ ಮೊತ್ಕರ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಪೊಲೀಸರ ಈ ಕ್ರಮ ಖಂಡಿಸಿ ಬಿಜೆಪಿ ನ್ಯಾಯಯುತ, ಶಾಂತಿಯುತ ಪ್ರತಿಭಟನೆ ನಡೆಸಿದರೆ, ದನಗಳ ರೀತಿಯಲ್ಲಿ ಎಳೆದಾಡಿ, ನೂಕಾಡಿ, ನಮ್ಮ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಸೇರಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿದ್ದಾರೆ. ದೌರ್ಜನ್ಯ ಎಸಗಿದ್ದಾರೆ. ಇದನ್ನು ಖಂಡಿಸುತ್ತೇವೆ, ಈ ರೀತಿ ವರ್ತಿಸಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು? ಅಧಿಕಾರ ಯಾರಿಗೂ ಶಾಶ್ವತವಲ್ಲ, ಮತ್ತೆ ನಮ್ಮದೇ ಸರ್ಕಾರ ಬರುತ್ತೆ ಕಾದುನೋಡಿ ಎಂದು ಕೈ ನಾಯಕರಿಗೆ ಎಚ್ಚರಿಸಿದರು.
ಗಾಂಜಾ, ಮಟಕಾ, ಸೇರಿ ಜೂಜು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರನ್ನು ಬಿಟ್ಟು ನಮ್ಮ ಮೇಲೆ ಹಲ್ಲೆ, ದೌರ್ಜನ್ಯ ನಡೆಸಲು ಗೃಹ ಸಚಿವ ಪ್ರಿಯಾಂಕಾ ಖರ್ಗೆ ಮುಂದಾಗಿದ್ದಾರೆ, ಇದು ಸರಿಯಲ್ಲ. ರಾಜ್ಯಾದ್ಯಂತ ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಅದನ್ನು ಬಿಟ್ಟು ಗೃಹ ಸಚಿವ ಪ್ರಿಯಾಂಕ್ ಖರ್ಗೆ ದ್ವೇಷದ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು, ಜಿಲ್ಲೆಯ ಪೊಲೀಸರು ಮತ್ತೆ ನಮ್ಮ ಕಾರ್ಯಕರ್ತರು, ಮುಖಂಡರ ಮೇಲೆ ದೌರ್ಜನ್ಯ, ಹಲ್ಲೆ ನಡೆಸಲು ಮುಂದಾದರೆ, ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಇತರರಿದ್ದರು.



