ಒಬ್ಬ ಯುವ ಸಾಫ್ಟ್ವೇರ್ ಇಂಜಿನಿಯರ್ನನ್ನು ಕಲ್ಪಿಸಿಕೊಳ್ಳಿ. ರಾತ್ರಿ ಎರಡು ಗಂಟೆಗೆ ಆಕೆಯ ಫೋನ್ಗೆ ಕ್ಲೈಂಟ್ನಿಂದ ಸಂದೇಶವೊಂದು ಬರುತ್ತದೆ. ಆಕೆ ದಿಢೀರನೆ ಎಚ್ಚರಗೊಳ್ಳುತ್ತಾಳೆ, ಹೃದಯ ಜೋರಾಗಿ ಬಡಿದುಕೊಳ್ಳುತ್ತಿರುತ್ತದೆ, ಕೈಗಳಲ್ಲಿ ಒಂದು ರೀತಿಯ ನಡುಕ ಕಾಣಿಸಿಕೊಳ್ಳುತ್ತದೆ. ಇದನ್ನ “ನರಗಳ ಕಂಪನ” (nervous vibration) ಎಂದು ಕರೆಯಲಾಗುತ್ತದೆ. ಆಧುನಿಕ ಕಾರ್ಪೊರೇಟ್ ಜೀವನದ ಜಂಜಾಟದಲ್ಲಿ ಓಡುತ್ತಿರುವ ಇಪ್ಪತ್ತೈದು ವರ್ಷದ ಯುವತಿಗೆ ಇದು ಕೇವಲ ರೂಪಕವಲ್ಲ—ಇದು ಆಕೆಯ ಪ್ರತಿ ದಿನದ ಕಟು ವಾಸ್ತವ. ಇದು ಯಾವುದೇ ನಾಟಕೀಯತೆಯಲ್ಲ; ಇದೊಂದು ಆಧುನಿಕ ಸಾಂಕ್ರಾಮಿಕ ರೋಗ. ಈಗಿನ ಒತ್ತಡದ ಜೀವನದಲ್ಲಿ ನಮ್ಮನ್ನು ನಾವು ಶಾಂತಗೊಳಿಸುವುದು ಹೇಗೆ? ಯಾವೆಲ್ಲ ಪದಾರ್ಥಗಳ ಸೇವನೆಯಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ವೈದ್ಯರಾದ ಡಾ. ಮುರಳೀಧರ್ ಬಲ್ಲಾಳ್ ಅವರು ತಿಳಿಸಿದ್ದಾರೆ.

ದುಡ್ಡಿನ ಮೇಲೆ ನೆಮ್ಮದಿ, ಮನಃಶಾಂತಿ ಡಿಪೆಂಡ್!
ಜಾಗತಿಕವಾಗಿ ಕೋಟ್ಯಂತರ ಜನರು ಆತಂಕದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಕೆಲಸದ ಸ್ಥಳದ ಒತ್ತಡ ಇದಕ್ಕೆ ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿಯ ಪ್ರಕಾರ, ಆತಂಕ ಮತ್ತು ಖಿನ್ನತೆಯು ವಿಶ್ವಾದ್ಯಂತ ಜನರನ್ನು ಅಸಮರ್ಥರನ್ನಾಗಿ ಮಾಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಭಾರತ ಮತ್ತು ಇತರ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ನಡೆಸಿರುವ ಸಮೀಕ್ಷೆಗಳು, ದೀರ್ಘಾವಧಿಯ ಕೆಲಸದ ಸಮಯ, ಉದ್ಯೋಗದ ಅಭದ್ರತೆ ಮತ್ತು ಮನೆ-ಕೆಲಸದ ನಡುವಿನ ಗಡಿರೇಖೆಗಳು ಮಸುಕಾಗುತ್ತಿರುವುದರಿಂದ ಕೆಲಸದ ಸ್ಥಳದ ಒತ್ತಡ ಹೆಚ್ಚಾಗುತ್ತಿರುವುದನ್ನು ತೋರಿಸುತ್ತವೆ.
ನಾವು ಹಿಂದೆಂದೂ ಕಾಣದಂತಹ ಸಂಪರ್ಕದ (connectivity) ಯುಗದಲ್ಲಿ ಬದುಕುತ್ತಿದ್ದೇವೆ. ಆದರೂ ನಾವೊಂದು ವಿಚಿತ್ರ ವಿರೋಧಾಭಾಸವನ್ನು ಎದುರಿಸುತ್ತಿದ್ದೇವೆ. ನಾವು ಬಾಹ್ಯ ಪ್ರಪಂಚದೊಂದಿಗೆ ಎಷ್ಟು ಹೆಚ್ಚು ಸಂಪರ್ಕ ಹೊಂದುತ್ತಿದ್ದೇವೆಯೋ, ಅಷ್ಟೇ ಆಳವಾಗಿ ನಮ್ಮ ಸ್ವಂತ ದೇಹದಿಂದ ದೂರವಾಗುತ್ತಿದ್ದೇವೆ. ನಾವು ಮನಃಶಾಂತಿಯ ವೆಚ್ಚದಲ್ಲಿ ಉತ್ಪಾದಕತೆಯ ಬೆನ್ನಟ್ಟುತ್ತಿದ್ದೇವೆ. ಆದರೆ ಅಂತಿಮವಾಗಿ ದೊಡ್ಡ ಪ್ರೆಸೆಂಟೇಶನ್ಗೆ ಮುನ್ನ ನಮಗೆ ಕಾಡುವ ಆ “ನರಗಳ ಕಂಪನ” ಅಥವಾ ಕೈಗಳ ಸೂಕ್ಷ್ಮ ನಡುಕ ಕೇವಲ ಮಾನಸಿಕ ಒತ್ತಡವಲ್ಲ, ಬದಲಿಗೆ ಅವು ನಮ್ಮ ದೇಹವು ಸಹಾಯಕ್ಕಾಗಿ ಕೂಗುತ್ತಿರುವ ದೈಹಿಕ ಆರ್ತನಾದ ಎಂಬುದು ನಮಗೆ ಅರಿವಾಗುತ್ತದೆ.

ಚಂದ್ರನ ಬದಲು ಮೊಬೈಲ್ ಬೆಳಕಿಗೆ ಆದ್ಯತೆ
ಆಯುರ್ವೇದದ ದೃಷ್ಟಿಕೋನದಿಂದ ನೋಡಿದರೆ, ಈ ಆಧುನಿಕ ಗೊಂದಲಕ್ಕೆ ಒಂದು ನಿರ್ದಿಷ್ಟವಾದ ಮೂಲ ಕಾರಣವಿದೆ. ಅದುವೇ ವಾತ ದೋಷ ಮತ್ತು ಮನಸ್ಸಿನ ಏರುಪೇರು (ಚಿತ್ತ ಚಾಂಚಲ್ಯ ಅಥವಾ ಅಸ್ಥಿರ ಮನಸ್ಸು ಉದ್ವೇಗ ಅಥವಾ ಆತಂಕಕ್ಕೆ ಕಾರಣವಾಗುತ್ತದೆ). ವಾತವು ಚಲನೆಯ ಶಕ್ತಿಯಾಗಿದ್ದು, ಇದು ವಾಯು ಮತ್ತು ಆಕಾಶ ತತ್ವಗಳಿಂದ ನಿಯಂತ್ರಿಸಲ್ಪಡುತ್ತದೆ. ಇದು ನಿಮ್ಮ ನರಮಂಡಲ, ಉಸಿರಾಟದ ಹರಿವು ಮತ್ತು ನಿಮ್ಮ ಆಲೋಚನೆಗಳ ವೇಗವನ್ನು ನಿಯಂತ್ರಿಸುತ್ತದೆ. ಕೆಲಸದ ಒತ್ತಡ ಹೆಚ್ಚಾದಾಗ, ಡೆಡ್ಲೈನ್ಗಳನ್ನು ತಲುಪಲು ನಾವು ಊಟವನ್ನು ಬಿಟ್ಟಾಗ ಮತ್ತು ಚಂದ್ರನ ಬೆಳಕಿನ ಜಾಗವನ್ನು ಮೊಬೈಲ್ನ ನೀಲಿ ಬೆಳಕು ಆಕ್ರಮಿಸಿಕೊಂಡಾಗ, ವಾತವು ಅತಿಯಾಗಿ ಪ್ರಕೋಪಗೊಳ್ಳುತ್ತದೆ. ಇದನ್ನು ತಣ್ಣನೆಯ, ಚುಚ್ಚುವ ಶರತ್ಕಾಲದ ಗಾಳಿಗೆ ಹೋಲಿಸಬಹುದು. ಮಂದ ಮಾರುತವು ವಾತಾವರಣವನ್ನು ತಿಳಿಗೊಳಿಸುತ್ತದೆ, ಆದರೆ ಸುಂಟರಗಾಳಿಯು ಮರಗಳನ್ನೇ ಬುಡಮೇಲು ಮಾಡುತ್ತದೆ. ನಿಮ್ಮ ದೇಹದಲ್ಲಿ ವಾತವು ಪ್ರಕೋಪಗೊಂಡಾಗ, ಅದು ಆತಂಕದಿಂದ ವೇಗವಾಗಿ ಬಡಿದುಕೊಳ್ಳುವ ಹೃದಯ, ಏರುಪೇರಾಗುವ ನಿದ್ರೆಯ ಮಾದರಿಗಳು ಮತ್ತು ಆ ದೈಹಿಕ ನಡುಕಕ್ಕೆ ಕಾರಣವಾಗುತ್ತದೆ—ಇದು ಮಿತಿ ಮೀರಿದ ವಿದ್ಯುತ್ ಸರ್ಕ್ಯೂಟ್ ಬ್ರೇಕರ್ನಂತೆ ನರಗಳ ಕಂಪನವನ್ನು ಉಂಟುಮಾಡುತ್ತದೆ. ಆಯುರ್ವೇದದ ಸೌಂದರ್ಯವಿರುವುದು ಅದರ ವೈಜ್ಞಾನಿಕ ಮನೋಭಾವದಲ್ಲಿ. ಇದು ಕೇವಲ ರೋಗಲಕ್ಷಣಕ್ಕಲ್ಲ, ಬದಲಿಗೆ ರೋಗದ ಮೂಲಕ್ಕೇ ಚಿಕಿತ್ಸೆ ನೀಡುತ್ತದೆ. ವಾತವು ತಂಪಾಗಿ, ಒಣಗಿ ಮತ್ತು ಅಸ್ಥಿರವಾಗಿದ್ದರೆ, ಅದಕ್ಕೆ ಪರಿಹಾರವು ಬೆಚ್ಚಗಿನ, ತಳವೂರುವ (grounding) ಮತ್ತು ಸ್ಥಿರವಾದದ್ದಾಗಿರಬೇಕು. ನಿಮ್ಮ ಸಮತೋಲನವನ್ನು ಕಂಡುಕೊಳ್ಳಲು ನಿಮಗೆ ದುಬಾರಿ ಔಷಧಾಲಯಗಳ ಅಗತ್ಯವಿಲ್ಲ. ನಿಮ್ಮ ಅಡುಗೆಮನೆಯೇ ನಿಮ್ಮ ಮೊದಲ ಪ್ರಯೋಗಾಲಯ.

ಒಳಗಿನ ಈ ಚಂಡಮಾರುತವನ್ನು ಶಾಂತಗೊಳಿಸಲು ಈ ಕೆಳಗಿನ ಪ್ರಾಯೋಗಿಕ, ದೈನಂದಿನ ಆಚರಣೆಗಳನ್ನು ಪರಿಗಣಿಸಿ:
• ಶ್ವೇತ ಅಮೃತ (ಅಶ್ವಗಂಧ ಮತ್ತು ಉಗುರುಬೆಚ್ಚಗಿನ ಹಾಲು):
ಆಧುನಿಕ ವಿಜ್ಞಾನವು ಅಶ್ವಗಂಧವನ್ನು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಅನ್ನು ಕಡಿಮೆ ಮಾಡುವ ಒಂದು ಶಕ್ತಿಶಾಲಿ ಅಡಾಪ್ಟೋಜೆನ್ ಎಂದು ವರ್ಗೀಕರಿಸಿದೆ. ಅರ್ಧದಿಂದ ಒಂದು ಚಮಚ ಅಶ್ವಗಂಧ ಪುಡಿಯನ್ನು ಎ2 (A2) ಹಾಲಿನಲ್ಲಿ ಸಣ್ಣ ಉರಿಯಲ್ಲಿ ಮೂರರಿಂದ ರಿಂದ ಐದು ನಿಮಿಷಗಳ ಕಾಲ ಕುದಿಸಿ, ದಿನಕ್ಕೆ ಒಮ್ಮೆ ಅಥವಾ ಉಗುರುಬೆಚ್ಚಗಿನ, ಸ್ವಲ್ಪ ಮಸಾಲೆ (ಜೀರಿಗೆ ಅಥವಾ ಕೊತ್ತಂಬರಿ ನಂತಹ) ಬೆರೆಸಿದ ಹಾಲನ್ನು ಕುಡಿಯುವುದು ಚಂಚಲ ಮನಸ್ಸಿಗೆ ನೈಸರ್ಗಿಕ ಆಧಾರವಾಗಿ ಕೆಲಸ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಈ ಹಾಲಿಗೆ ಒಂದು ಚಿಟಿಕೆ ಜಾಜಿಕಾಯಿ ಪುಡಿಯನ್ನು ಸೇರಿಸಬಹುದು. ಜಾಜಿಕಾಯಿಯು ನೈಸರ್ಗಿಕ ನಿದ್ರಾಜನಕ ಗುಣಗಳನ್ನು ಹೊಂದಿದ್ದು, ನರಮಂಡಲವನ್ನು ಮೃದುವಾಗಿ ಶಾಂತಗೊಳಿಸುತ್ತದೆ. ಅಶ್ವಗಂಧವು (Withania somnifera) ಒತ್ತಡದ ಪ್ರಮಾಣ ಮತ್ತು ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಹಲವಾರು ಯಾದೃಚ್ಛಿಕ ಪ್ರಯೋಗಗಳು (randomized trials) ಸಾಕ್ಷಿಯಾಗಿವೆ. ಒಂದು ವೇಳೆ ಯಾರಾದರೂ ಇದನ್ನು ಅನುಸರಿಸಲು ಕಷ್ಟ ಎಂದು ಭಾವಿಸಿದರೆ, ಅವರು ಪ್ರತಿಷ್ಠಿತ ಔಷಧಾಲಯದಿಂದ ಗುಣಮಟ್ಟದ ಅಶ್ವಗಂಧ ಸಾರದ ಕ್ಯಾಪ್ಸುಲ್ ಅನ್ನು ದಿನಕ್ಕೆ ಎರಡು ಬಾರಿ ತಲಾ ಒಂದು ಕ್ಯಾಪ್ಸುಲ್ನಂತೆ ತೆಗೆದುಕೊಳ್ಳಬಹುದು.

• ದಾಲ್ಚಿನ್ನಿ-ಶುಂಠಿ ಕಷಾಯ:
ನಿಮ್ಮ ಮೂರನೇ ಕಪ್ ಎಸ್ಪ್ರೆಸ್ಸೋ ಕಾಫಿಯನ್ನು ತ್ಯಜಿಸಿ. ಇದು ದೇಹದಲ್ಲಿ ವಾತಕ್ಕೆ ದ್ರವ ಇಂಧನದಂತೆ ಕೆಲಸ ಮಾಡುತ್ತದೆ. ಅದರ ಬದಲಿಗೆ ತಾಜಾ ಶುಂಠಿ ಮತ್ತು ದಾಲ್ಚಿನ್ನಿ ಮಿಶ್ರಿತ ಬೆಚ್ಚಗಿನ ಚಹಾವನ್ನು ಕುಡಿಯಿರಿ. ಈ ಮಸಾಲೆಗಳು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತವೆ ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ದೇಹವು ದೀರ್ಘಕಾಲದ “ಹೋರಾಡು ಅಥವಾ ಓಡಿಹೋಗು” (fight-or-flight) ಒತ್ತಡದ ಸ್ಥಿತಿಯಲ್ಲಿದ್ದಾಗ ಜೀರ್ಣಕ್ರಿಯೆಯು ಖಂಡಿತವಾಗಿಯೂ ಮಂದಗತಿಯಲ್ಲಿರುತ್ತದೆ.

• ಸ್ವಯಂ ಅಭ್ಯಂಗ (ಬೆಚ್ಚಗಿನ ಎಣ್ಣೆ ಮಸಾಜ್):
ನಿಮ್ಮ ಬೆಳಗಿನ ಸ್ನಾನದ ಮುನ್ನ, ಬೆಚ್ಚಗಿನ ಎಳ್ಳೆಣ್ಣೆಯನ್ನು ನಿಮ್ಮ ನೆತ್ತಿ ಮತ್ತು ಪಾದಗಳ ಅಡಿಗೆ ಹಚ್ಚಿ ಮಸಾಜ್ ಮಾಡಿ. ಆಯುರ್ವೇದದಲ್ಲಿ, ತ್ವಚೆಯನ್ನು (ಚರ್ಮ) ವಾತದ ಪ್ರಮುಖ ಸ್ಥಾನವೆಂದು ಪರಿಗಣಿಸಲಾಗಿದೆ. ಇದನ್ನು ಮಸಾಜ್ ಮಾಡುವುದರಿಂದ ಮೆದುಳಿಗೆ ತಕ್ಷಣವೇ ಶಾಂತಗೊಳಿಸುವ ನರಸಂಬಂಧಿ ಸಂಕೇತ ರವಾನೆಯಾಗುತ್ತದೆ, ಅದು “ನೀನು ಸುರಕ್ಷಿತವಾಗಿದ್ದೀಯಾ” ಎಂದು ಮೆದುಳಿಗೆ ಮನವರಿಕೆ ಮಾಡಿಕೊಡುತ್ತದೆ.

• ಸಾವಧಾನದ ಉಸಿರಾಟ ಅಥವಾ ಪ್ರಾಣಾಯಾಮ:
ಕೆಲಸದ ಸಮಯದ ನಡುವೆ ಕೆಲವೇ ನಿಮಿಷಗಳ ಕಾಲ ಪ್ರಾಣಾಯಾಮ ಮಾಡುವುದರಿಂದ ನಿಮ್ಮನ್ನು ನೀವು ಮರುಚೇತನಗೊಳಿಸಿಕೊಳ್ಳಲು ಮತ್ತು ಕಠಿಣವಾದ ಕೆಲಸದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಲು ಅದ್ಭುತವಾಗಿ ಸಹಾಯ ಮಾಡುತ್ತದೆ. ಕೆಲಸದ ನಡುವೆ ತೆಗೆದುಕೊಳ್ಳುವ ಇಂತಹ ಸಣ್ಣ ವಿರಾಮಗಳು ಕೆಲಸದ ಸ್ಥಳದ ಮಾನಸಿಕ ವಾತಾವರಣವನ್ನು ಸುಧಾರಿಸಲು ದೀರ್ಘಕಾಲದವರೆಗೆ ಸಹಾಯ ಮಾಡುತ್ತವೆ.
ಅಂತಿಮವಾಗಿ, ಅತಿಯಾದ ಒತ್ತಡದ ಜಗತ್ತಿನಲ್ಲಿ ಆತಂಕವನ್ನು ನಿರ್ವಹಿಸುವುದು ಎಂದರೆ ಗಾಳಿ ಬೀಸುವುದನ್ನು ತಡೆಯುವುದಲ್ಲ. ಬದಲಿಗೆ ನಿಮ್ಮ ದೋಣಿಯ ಪಾಲನ್ನು (sail) ಹೇಗೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು ಎಂಬುದನ್ನು ಕಲಿಯುವುದು. ಈ ಸರಳವಾದ, ತಳವೂರುವ ಅಡುಗೆಮನೆಯ ಪರಿಹಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮತ್ತು ನಮ್ಮೊಳಗಿನ ತತ್ವಗಳ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ನಾವು ನಮ್ಮ ದೈನಂದಿನ ಒತ್ತಡವನ್ನು ನಮ್ಮನ್ನು ನಿಷ್ಕ್ರಿಯಗೊಳಿಸುವ ಚಂಡಮಾರುತದಿಂದ ನಿಯಂತ್ರಿಸಬಹುದಾದ ತಂಗಾಳಿಯಾಗಿ ಪರಿವರ್ತಿಸಬಹುದು.

ನಿಜವಾದ ಉತ್ಪಾದಕತೆಗೆ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ವಾತವನ್ನು ಶಾಂತಗೊಳಿಸಿ, ಒಳಗಿನ ಗೊಂದಲವನ್ನು ನಿವಾರಿಸಿ, ಮತ್ತು ನಿಮ್ಮ ಮನಸ್ಸು ಅದರ ನೈಸರ್ಗಿಕ, ಸ್ಥಿರ ಲಯಕ್ಕೆ ಮರಳಲು ಬಿಡಿ. ಆಯುರ್ವೇದವು ಒಂದು ಸುಸಂಬದ್ಧವಾದ ಚೌಕಟ್ಟನ್ನು ಒದಗಿಸುತ್ತದೆ—ಸ್ಥಿರವಾದ ದಿನಚರಿಗಳೊಂದಿಗೆ ವಾತವನ್ನು ಸಮತೋಲನಗೊಳಿಸುವುದು, ಪೋಷಕಾಂಶಯುಕ್ತ ರಸಾಯನ (ಪುನಶ್ಚೇತನಗೊಳಿಸುವ) ಗಿಡಮೂಲಿಕೆಗಳು ಮತ್ತು ಸಾವಧಾನದ ಆಚರಣೆಗಳು—ಇವು ಇಂದಿನ ಆಧುನಿಕ ಜೀವನಶೈಲಿ ಮತ್ತು ಕೆಲಸದ ಅಭ್ಯಾಸಗಳ ಗೊಂದಲಗಳ ನಡುವೆಯೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ.
ಇಲ್ಲಿರುವ ಆಹ್ವಾನ ಸರಳವಾಗಿದೆ: ನಿಮ್ಮ ನರಮಂಡಲವನ್ನು ಒಂದು ಸೂಕ್ಷ್ಮವಾದ ಸಂಗೀತ ವಾದ್ಯವನ್ನು ನೋಡಿಕೊಳ್ಳುವಷ್ಟೇ ಜಾಗರೂಕತೆಯಿಂದ ಉಪಚರಿಸಿ. ಅದನ್ನು ಪ್ರತಿದಿನ ಶ್ರುತಿಗೊಳಿಸಿ, ಆಗ ನಿಮ್ಮ ಜೀವನದ ಸಂಗೀತವು ಮತ್ತೆ ಮಧುರವಾಗುತ್ತದೆ.
- ಡಾ. ಮುರಳೀಧರ್ ಆರ್. ಬಲ್ಲಾಳ್
ಜನರಲ್ ಮ್ಯಾನೇಜರ್
ಎಸ್ಡಿಎಂ ಆಯುರ್ವೇದ ಫಾರ್ಮಸಿ
ಉಡುಪಿ



