ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಅಕ್ಟೋಬರ್ 16, 2026ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿರುವ ಈ ಸಿನಿಮಾ, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ವರದಿಯ ಪ್ರಕಾರ, ನಿರ್ದೇಶಕ ನೆಲ್ಸನ್ ಮೊದಲು ಬರೆದುಕೊಂಡ ಕಥೆ ಹಾಗೂ ಮೊದಲ ಕಟ್ ಸುಮಾರು 4 ಗಂಟೆ 25 ನಿಮಿಷಗಳಷ್ಟು ದೀರ್ಘವಾಗಿತ್ತು. ಆದರೆ, ಪ್ರೇಕ್ಷಕರಿಗೆ ಮೂಲ ಕಥೆಯಿಂದ ಎಲ್ಲೂ ಗಮನ ಭಂಗವಾಗಬಾರದು ಹಾಗೂ ಸ್ಟ್ರಾಂಗ್ ಚಿತ್ರಕಥೆಯನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ಎಡಿಟಿಂಗ್ನಲ್ಲಿ ಬರೋಬ್ಬರಿ 100ಕ್ಕೂ ಹೆಚ್ಚು ನಿಮಿಷಗಳನ್ನು ಕತ್ತರಿಸಲಾಗಿದೆ. ಈಗ ಅಂತಿಮವಾಗಿ ಸಿನಿಮಾ 2 ಗಂಟೆ 45 ನಿಮಿಷಗಳ ಆಕ್ಷನ್ ರನ್ಟೈಮ್ನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.
ಚಿತ್ರದಲ್ಲಿ ನಿವೃತ್ತ ಜೈಲರ್ ‘ಟೈಗರ್’ ಮುತ್ತುವೇಲ್ ಪಂಡಿಯನ್ ತನ್ನ ಕುಟುಂಬ ಹಾಗೂ ಗೌರವಕ್ಕೆ ಎದುರಾಗುವ ಬೆದರಿಕೆಯನ್ನು ಮೆಟ್ಟಿ ನಿಲ್ಲಲು ಮತ್ತೆ ಅಖಾಡಕ್ಕಿಳಿಯುತ್ತಾನೆ. ಶತ್ರುಗಳ ಹೆಡೆಮುರಿ ಕಟ್ಟಲು ಆತ ಸಾಮಾನ್ಯ ವಾಹನ ಚಾಲಕನಾಗಿ ಅವರ ಗುಂಪಿಗೆ ಸೇರಿಕೊಂಡು, ಒಳಗಿನಿಂದಲೇ ಅಸಲಿ ಸೂತ್ರಧಾರರನ್ನು ಹುಡುಕಲು ಪ್ಲಾನ್ ಮಾಡುತ್ತಾನೆ. ತನ್ನ ಪ್ರಾಣಕ್ಕಿಂತ ಮಿಗಿಲಾದ ಕುಟುಂಬವನ್ನು ಉಳಿಸಲು, ತನ್ನ ಹಳೆಯ ಮಾರಕ ಕೌಶಲಗಳನ್ನು ಮತ್ತು ಹಳೆಯ ಸ್ನೇಹದ ನೆಟ್ವರ್ಕ್ ಅನ್ನು ಬಳಸಿ ದೊಡ್ಡ ಮಟ್ಟದ ಆಪರೇಷನ್ ನಡೆಸುವುದೇ ಈ ಚಿತ್ರದ ಮುಖ್ಯ ಕಥಾವಸ್ತು.
ಮೊದಲ ಭಾಗದಲ್ಲಿದ್ದ ರಮ್ಯಾ ಕೃಷ್ಣನ್, ಯೋಗಿ ಬಾಬು, ಜಾಕಿ ಶ್ರಾಫ್ ಮತ್ತು ಮಿರ್ನಾ ಜೊತೆಗೆ ಈ ಬಾರಿ ಎಸ್.ಜೆ. ಸೂರ್ಯ, ಸೂರಜ್, ವಿದ್ಯಾ ಬಾಲನ್ ಹಾಗೂ ಮಿಥುನ್ ಚಕ್ರವರ್ತಿ ಹೊಸ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಲದಕ್ಕೆ, ಮೋಹನ್ಲಾಲ್, ಶಿವರಾಜ್ಕುಮಾರ್, ವಿಜಯ್ ಸೇತುಪತಿ ಮತ್ತು ಹೃತಿಕ್ ರೋಷನ್ ಅವರಂತಹ ಘಟಾನುಘಟಿ ನಟರು ಸ್ಪೆಷಲ್ ಕ್ಯಾಮಿಯೋ ಪಾತ್ರಗಳಲ್ಲಿ ಮಾಸ್ ಹವಾ ಸೃಷ್ಟಿಸಲಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಅದ್ಧೂರಿ ಪ್ರೀ-ರಿಲೀಸ್ ಇವೆಂಟ್ ‘ಸನ್ ನೆಕ್ಸ್ಟ್’ OTT ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ.



