October 7, 2026
Wednesday, October 7, 2026
spot_img

ವಿವಾಹಿತೆಯ ಅನುಮಾನಾಸ್ಪದ ಸಾ*ವು: ಗಂಡನ ಮನೆಯವರ ವಿರುದ್ಧವೇ ಕೊ*ಲೆ ಆರೋಪ

ಹೊಸದಿಗಂತ ವರದಿ ದಾವಣಗೆರೆ:

ಜಿಲ್ಲೆಯ ಹರಿಹರ ತಾಲೂಕು ಕಡ್ಲೆಗೊಂದಿ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಮೃತದೇಹದೊಂದಿಗೆ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ನಡೆದಿದೆ.

ಗ್ರಾಮದ 26 ವರ್ಷದ ವಿನುತಾ ಮೃತ ದುರ್ದೈವಿ. ಕಳೆದ 5 ವರ್ಷಗಳ ಹಿಂದೆ ಅದೇ ಗ್ರಾಮದ ಆಕೆಯ ತಾಯಿಯ ಚಿಕ್ಕಪ್ಪನ ಮಗನಾದ ಶಿವಶಂಕರ್ ಜೊತೆ ಇವರ ವಿವಾಹವಾಗಿತ್ತು. ಮಕ್ಕಳಾಗದ ಕಾರಣ ಬಂಜೆ ಅಂತಾ ಮಾನಸಿಕವಾಗಿ ನಿಂದಿಸಲಾಗುತ್ತಿತ್ತು. ಇದರೊಂದಿಗೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಪತಿ ಹಾಗೂ ಆತನ ಕುಟುಂಬಸ್ಥರು ನಿತ್ಯ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ವಿನುತಾ ತಮ್ಮ ತವರು ಮನೆಯಲ್ಲಿ ನಡೆದ ಅಜ್ಜನ ತಿಂಗಳ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರಳಿದ್ದ ವಿನುತಾರನ್ನು ಸಂಜೆ 4 ಗಂಟೆಯ ಸುಮಾರಿಗೆ ಗಂಡನ ಮನೆಯವರು ಹೊತ್ತು ತಂದಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಆಕೆ ನೇಣು ಬಿಗಿದುಕೊಂಡಿದ್ದಾಳೆ ಅಂತಾ ಗಂಡನ ಮನೆಯವರು ತಿಳಿಸಿದ್ದಾರೆ. ತಕ್ಷಣವೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಸಧ್ಯ ಮಹಿಳೆಯ ಪತಿ ಶಿವಶಂಕರ್, ಮಾವ ಈಶ್ವರಪ್ಪ ಹಾಗೂ ಅತ್ತೆ ಶಾಂತಮ್ಮ ನಾಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ವಿನುತಾ ಕುಟುಂಬಸ್ಥರು ಮೃತದೇಹವನ್ನು ದಾವಣಗೆರೆಯ ಎಸ್ಪಿ ಕಚೇರಿಗೆ ತಂದು ಕಣ್ಣೀರಿಡುತ್ತಾ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು. ಈ ಸಂಬಂಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Must Read