October 8, 2026
Thursday, October 8, 2026
spot_img

ನಾಳೆ ನಾನಿರುತ್ತೇನೋ ಇಲ್ಲವೋ: ಕೆಲವೇ ದಿನಗಳಲ್ಲಿ ನಿಜವಾಯ್ತು ನಾನಾ ಪಾಟೇಕರ್ ನುಡಿದ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಹಿರಿಯ ಹಾಗೂ ನಟನಾ ದಿಗ್ಗಜ ನಾನಾ ಪಾಟೇಕರ್ ಅವರು ಇಂದು ಬೆಳಗಿನ ಜಾವ ಗೋವಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 75 ವರ್ಷ ವಯಸ್ಸಿನ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರ ಪ್ರಯತ್ನ ಫಲ ನೀಡಲಿಲ್ಲ.

45 ನಿಮಿಷಗಳ ಕಠಿಣ ಹೋರಾಟ

ಮಣಿಪಾಲ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ನೀಡಿರುವ ಮಾಹಿತಿಯಂತೆ, ನಾನಾ ಪಾಟೇಕರ್ ಅವರನ್ನು ಆಸ್ಪತ್ರೆಗೆ ತಂದ ತಕ್ಷಣ ವೈದ್ಯರ ತಂಡ ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿ ಜೀವ ಉಳಿಸಲು ಪ್ರಯತ್ನ ನಡೆಸಿತು. ಆದರೆ ಅವರ ಹೃದಯದಲ್ಲಿ ಯಾವುದೇ ಎಲೆಕ್ಟ್ರಿಕಲ್ ಚಟುವಟಿಕೆ ಕಂಡುಬರದೆ ಸಂಪೂರ್ಣ ಅಸಿಸ್ಟೋಲ್ ಸ್ಥಿತಿಯಲ್ಲಿದ್ದರು. ಕೊನೆಗೆ ಬೆಳಿಗ್ಗೆ 5:10ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಪ್ರಸ್ತುತ ಮರಣೋತ್ತರ ಪರೀಕ್ಷೆಗೆ ತಯಾರಿ ನಡೆದಿದೆ.

ಆ ಮಾತು ನಿಜವಾಯ್ತು!

ಅಚ್ಚರಿಯ ಸಂಗತಿಯೆಂದರೆ, ಅಗಲುವಿಕೆಯ ಕೇವಲ ನಾಲ್ಕು ದಿನಗಳ ಮುಂಚೆ ಅಂದರೆ ಅಕ್ಟೋಬರ್ 4ರಂದು ದೊನಾ ಪೌಲಾದಲ್ಲಿ ನಡೆದ ಸಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್ ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್ ಭಾಗವಹಿಸಿದ್ದರು. ತಮ್ಮ ಆಪ್ತ ಸ್ನೇಹಿತ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ನೆನಪಿಸಿಕೊಂಡು ಬದುಕಿನ ಸಾವು-ನೋವಿನ ಬಗ್ಗೆ ಮಾತನಾಡಿದ್ದರು.

“ಮನೋಹರ್ ಪರಿಕ್ಕರ್ ನನ್ನ ಆಪ್ತ ಸ್ನೇಹಿತರಾಗಿದ್ದರು. ಅವರ ಸಾಧನೆ ದೊಡ್ಡದಿತ್ತು. ಕಮ್ಮಿ ಅವಧಿಯ ಬದುಕಿನಲ್ಲಿ ಒಬ್ಬ ವ್ಯಕ್ತಿ ಇಷ್ಟೊಂದು ಸಾಧನೆ ಮಾಡಲು ಹೇಗೆ ಸಾಧ್ಯ? ನಾವೆಲ್ಲರೂ ಒಂದಲ್ಲಾ ಒಂದು ದಿನ ಹೋಗಲೇಬೇಕು. ನಾಳೆ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಪ್ರತಿಯೊಬ್ಬರ ಜೀವನವೂ ಆ ಹಂತ ತಲುಪುತ್ತದೆ. ಆದರೆ ಅದಕ್ಕೂ ಮುನ್ನ, ನಾವು ಮಾಡಲು ಬಯಸಿದ್ದನ್ನು ಮಾಡಲು ಸಾಧ್ಯವಾಗಿದೆಯೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು” ಎಂದು ಹೇಳಿದ್ದರು.

ತಮ್ಮ ಅದ್ಭುತ ಸಂಭಾಷಣೆ ಹಾಗೂ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳನ್ನುಗಳಿಸಿದ್ದ ನಾನಾ ಪಾಟೇಕರ್ ಅವರ ಈ ಮಾತುಗಳು ಇಂದು ನಿಜವಾಗಿರುವುದು ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದಲ್ಲಿ ತೀವ್ರ ದುಃಖವನ್ನುಂಟುಮಾಡಿದೆ.

Must Read