October 8, 2026
Thursday, October 8, 2026

ನಟನಾ ದಿಗ್ಗಜನ ಅಗಲಿಕೆಗೆ ಗಣ್ಯರ ಕಂಬನಿ: ಪಾಟೇಕರ್ ಪ್ರಭಾವಶಾಲಿ ವ್ಯಕ್ತಿತ್ವ ಸ್ಮರಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಂಭೀರ ಧ್ವನಿ, ವಿಭಿನ್ನ ನಟನೆಯಿಂದ ಪಾತ್ರಗಳಿಗೆ ಜೀವ ತುಂಬುವ, ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ನಟ ನಾನಾ ಪಾಟೇಕರ್ 75ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇಂದು ನಿಧನರಾದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅವರ ಅಗಲಿಕೆ ತುಂಬಲಾರದ ನಷ್ಟ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಅವರ ನಟನೆಯಲ್ಲಿದ್ದ ತೀವ್ರತೆ, ವಿಭಿನ್ನತೆ ಮತ್ತು ಪ್ರಭಾವಶಾಲಿ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ಆದ ಸೃಜನಶೀಲತೆ ಹಾಗೂ ವೈವಿಧ್ಯತೆಯನ್ನು ತುಂಬುತ್ತಿದ್ದ ಅವರು, ಹಲವು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುವ ಪಾತ್ರಗಳನ್ನು ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ನಾನಾ ಪಾಟೇಕರ್ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಪ್ರಧಾನಿ ಹೇಳಿದ್ದಾರೆ.

ಸಮಾಜ ಸೇವೆ ನೆನಪಿಸಿಕೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ನಾನಾ ಪಾಟೇಕರ್ ಅವರ ನಿಧಾನಕ್ಕೆ ಸಂತಾಪ ಸೂಚಿಸಿದ್ದು, ಅವರ ನಿಧನವನ್ನು ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದ್ದಾರೆ. ಸಮಾಜಮುಖಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ ನಾನಾ ಅವರ ಸೇವೆಯನ್ನು ಅವರು ನೆನಪಿಸಿಕೊಂಡಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಗೂ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಾಟೇಕರ್ ಜೊತೆಗಿನ ಒಡನಾಟ ನೆನಪಿಸಿಕೊಂಡ ಗೋವಾ ಮುಖ್ಯಮಂತ್ರಿ

ಇದೇ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ನಾನಾ ಪಾಟೇಕರ್ ಅವರೊಂದಿಗಿನ ವೈಯಕ್ತಿಕ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. “ನಾನು ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ” ಎಂದು ಹೇಳಿರುವ ಸಾವಂತ್, ನಾನಾ ಪಾಟೇಕರ್ ಗೋವಾಕ್ಕೆ ಬಂದಾಗಲೆಲ್ಲಾ ತಮ್ಮನ್ನು ತಪ್ಪದೇ ಭೇಟಿಯಾಗುತ್ತಿದ್ದರು ಎಂದು ಹೇಳಿದ್ದಾರೆ. ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲೊಬ್ಬರಾಗಿದ್ದ ಅವರು ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು. ಗೋವಾದೊಂದಿಗೆ ನಾನಾ ಪಾಟೇಕರ್ ಅವರಿಗೆ ಆಳವಾದ ನಂಟಿತ್ತು ಎಂದು ಸಾವಂತ್ ಹೇಳಿದ್ದಾರೆ.

ನಾನಾ ಪಾಟೇಕರ್ ಫೌಂಡೇಶನ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಗೋವಾದಲ್ಲೂ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದರು. ರಾಜ್ಯದಲ್ಲಿ ತಮ್ಮ ಸಮಾಜ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನೂ ಹೊಂದಿದ್ದರು ಎಂದು ಸಾವಂತ್ ತಿಳಿಸಿದ್ದಾರೆ. ದುಃಖದ ಈ ಸಂದರ್ಭದಲ್ಲಿ ನಾನಾ ಪಾಟೇಕರ್ ಕುಟುಂಬದೊಂದಿಗೆ ತಾವು ನಿಲ್ಲುವುದಾಗಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

Must Read