October 8, 2026
Thursday, October 8, 2026
spot_img

ಹೆಬ್ಬಾವು ಹಿಡಿದ ವಿಡಿಯೋ ವೈರಲ್: ಉರಗ ರಕ್ಷಕನಿಗೆ ಅರಣ್ಯ ಇಲಾಖೆಯಿಂದ ನೋಟಿಸ್

ಹೊಸದಿಗಂತ ವರದಿ ಕಾರವಾರ:

ಆಹಾರ ನುಂಗಿ ಹೊಲದಲ್ಲಿ ಮರದ ಪೊಟರೆಯೊಂದರ ಬಳಿ ಮಲಗಿದ್ದ ಭಾರೀ ಗಾತ್ರದ ಹೆಬ್ಬಾವೊಂದನ್ನು ಹಿಂಸಾತ್ಮಕ ರೀತಿಯಲ್ಲಿ ಹಿಡಿದು ವಿಡಿಯೋ ಚಿತ್ರೀಕರಣ ಮಾಡಿ ಬೇರೆ ಕಡೆ ಬಿಟ್ಟ ಮತ್ತು ಹೆಬ್ಬಾವು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಘಟನೆಗೆ ಸಂಬಂಧಿಸಿದಂತೆ ಉರಗ ರಕ್ಷಕರೋರ್ವರಿಗೆ ಅರಣ್ಯ ಇಲಾಖೆಯ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

ದಾಂಡೇಲಿಯ ಉರಗ ರಕ್ಷಕ ರಜಾಕ್ ಶಾ ಎನ್ನುವವರಿಗೆ ಹಳಿಯಾಳ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ನಿಯಮ 1ರ ಉಲ್ಲಂಘನೆಯ ಕುರಿತಂತೆ ನೋಟಿಸ್ ಜಾರಿ ಮಾಡಿದ್ದಾರೆ.

ದಾಂಡೇಲಿಯ ಕೊಣಪ ಗ್ರಾಮದಲ್ಲಿ ಹೊಲವೊಂದರ ಬಳಿ ಕೋಳಿ ನುಂಗಿದ ಭಾರೀ ಗಾತ್ರದ ಹೆಬ್ಬಾವೊಂದನ್ನು ಉರಗ ರಕ್ಷಕ ರಜಾಕ್ ಎಳೆದು ಚೀಲಕ್ಕೆ ತುಂಬಿದ್ದು ಈ ಸಂದರ್ಭದಲ್ಲಿ ಹೆಬ್ಬಾವು ದಾಳಿ ನಡೆಸಿದೆ, ಹೆಬ್ಬಾವನ್ನು ಹಿಡಿದು ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು ಹೆಬ್ಬಾವು ನುಂಗಿದ ಆಹಾರವನ್ನು ಹೊರಹಾಕಿದೆ, ಹೆಬ್ಬಾವು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದು ಹೆಬ್ಬಾವನ್ನು ಹಿಂಸಾತ್ಮಕ ರೀತಿಯಲ್ಲಿ ಹಿಡಿಯಲಾಗಿದೆ, ಅರಣ್ಯ ಇಲಾಖೆಯವರ ಅನುಪಸ್ಥಿತಿಯಲ್ಲಿ ಹೆಬ್ಬಾವನ್ನು ಹಿಡಿಯುವ ಕೆಲಸ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಈ ಹಿನ್ನೆಲೆಯಲ್ಲಿ ರಜಾಕ್ ಶಾಗೆ ಅರಣ್ಯ ಇಲಾಖೆಯ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದ್ದು, ತಮ್ಮಿಂದ ಅರಣ್ಯ ಕಾಯ್ದೆಯ ಉಲ್ಲಂಘನೆ ನಡೆದಿಲ್ಲ ಕಾನೂನಿನ ಪ್ರಕಾರ ನಡೆದುಕೊಳ್ಳುವುದಾಗಿ ಉರಗ ರಕ್ಷಕ ರಜಾಕ್ ಅವರು ಮುಚ್ಚಳಿಕೆ ಬರೆದು ಕೊಟ್ಟಿರುವುದಾಗಿ ತಿಳಿದು ಬಂದಿದೆ.

ಸುಮಾರು 15 ಅಡಿಗೂ ಉದ್ದದ 80 ಕೆಜಿಗಳಷ್ಟು ಭಾರದ ಹೆಬ್ಬಾವನ್ನು ರಕ್ಷಣೆ ಮಾಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Must Read