ಮಕ್ಕಳಿಗೆ ರಜೆ ಕೊಟ್ಟರು ಎಂದರೆ ಪೋಷಕರಿಗೆ ಟೆನ್ಷನ್ ಆರಂಭವಾಗುತ್ತದೆ. ಇಡೀ ಮನೆ ರಣರಂಗವಾಗುತ್ತದೆ. ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಮಕ್ಕಳನ್ನು ಅಂದವಾಗಿ ತಯಾರು ಮಾಡಿ ಕಳಿಸಿಬಿಟ್ಟರೆ ಅವರು ವಾಪಾಸ್ ಬರುವ ಸಮಯದಲ್ಲಿ ಮನೆಕೆಲಸ, ಆಫೀಸ್ ಕೆಲಸ, ಅಡುಗೆ, ಕ್ಲೀನಿಂಗ್ ಎಲ್ಲವೂ ಮುಗಿದುಬಿಡುತ್ತವೆ. ಆದರೆ ಮಕ್ಕಳು ಮನೆಯಲ್ಲಿಯೇ ಇದ್ದರೆ ಇದರಲ್ಲಿ ಒಂದು ಕೆಲಸ ಕೂಡ ಸರಿಯಾಗಿ ಆಗೋದಿಲ್ಲ. ಮಕ್ಕಳು ಪೋಷಕರ ಎನರ್ಜಿಯನ್ನು ಡ್ರೇನ್ ಮಾಡಿಬಿಡುತ್ತಾರೆ. ಅವರಲ್ಲಿ ಇರುವ ಸಿಕ್ಕಾಪಟ್ಟೆ ಎನರ್ಜಿಗೆ ಏನು ಮಾಡಿದರೂ ಸಾಲದು. ಮನೆಯಲ್ಲಿ ಇರುವ ಮಕ್ಕಳನ್ನು ಬ್ಯುಸಿಯಾಗಿಟ್ಟುಕೊಳ್ಳಲು ರೊಟೀನ್ ಫಿಕ್ಸ್ ಮಾಡಿ. ಬೆಳಗ್ಗೆ ಹತ್ತರಿಂದ ಹನ್ನೊಂದು ಡ್ರಾಯಿಂಗ್, ಹನ್ನೊಂದರಿಂದ ಹನ್ನೆರಡು ಮ್ಯೂಸಿಕ್ ಹೀಗೆ ದಿನದ ಸಮಯವನ್ನು ಎಲ್ಲದಕ್ಕೂ ಸೇರಿ ಡಿವೈಡ್ ಮಾಡಿ. ಎರಡು ದಿನದ ನಂತರ ಮಕ್ಕಳು ಆ ಸಮಯಕ್ಕೆ ಹೊಂದಿಕೊಳ್ತಾರೆ. ಮಕ್ಕಳನ್ನು ಬ್ಯುಸಿಯಾಗಿಡೋದು ಹೇಗೆ ಗೊತ್ತಿಲ್ಲ ಅಂದ್ರೆ ಈ ಆರ್ಟಿಕಲ್ ಸಂಪೂರ್ಣ ಓದಿ..
ಮೊಬೈಲ್ ಹಾಗೂ ಟಿವಿಯಿಂದ ಮಕ್ಕಳನ್ನು ದೂರ ಇಡಿ. ಅವರಿಗೆ ಯಾವ ಆಕ್ಟಿವಿಟಿ ಇಷ್ಟ ಎಂದು ಗಮನಿಸಿ. ಹಾಡು, ಡ್ಯಾನ್ಸ್, ಬರವಣಿಗೆ, ಮಾತು ಏನಿಷ್ಟ ಎನ್ನುವುದು ಗೊತ್ತಿರಲಿ. ಎಂಥ ಮಕ್ಕಳಿಗೇ ಆಗಲಿ ಚಿತ್ರ ಬಿಡಿಸುವುದು, ಬಣ್ಣ ಹಾಕುವುದು ತುಂಬಾನೇ ಇಷ್ಟ. ಹೊಸ ಬುಕ್ ಅಥವಾ ಹೊಸ ಕಲರ್ ಪೆನ್ಸಿಲ್ಸ್ ಕೊಡಿಸಿ. ಒಂದು ಗಂಟೆ ಟೈಮ್ಪಾಸ್ ಪಕ್ಕಾ!

ಮಕ್ಕಳಿಗೆ ಕಥೆ ಕೇಳೋದಕ್ಕೆ ಅಥವಾ ಕಥೆ ಹೇಳೋದಕ್ಕೆ ಆಸಕ್ತಿ ಇದೆ ಎಂದುಕೊಳ್ಳಿ. ಆಗ ಅರ್ಧ ಕಥೆಯನ್ನು ನೀವು ಹೇಳಿ ಉಳಿದರ್ಧ ಕಥೆಯನ್ನು ಅವರ ಇಮ್ಯಾಜಿನೇಷನ್ಗೆ ಬಿಡಿ. ಬರವಣಿಗೆ ಇಷ್ಟವಾದ್ರೆ ಹತ್ತು ಪದಾರ್ಥಗಳ ಹೆಸರನ್ನು ಬರೆದು ಇದನ್ನೆಲ್ಲಾ ಸೇರಿಸಿ ಒಂದು ಕಥೆ ತಯಾರಿಸುವಂತೆ ಹೇಳಿ.

ನಿಮ್ಮ ಮಕ್ಕಳು ಹುಡುಗರಾಗಿದ್ರೆ ಅವರಿಗೆ ಫಿಸಿಕಲ್ ಆಟ ಅಂದರೆ ಟ್ರೆಷರ್ ಹಂಟ್, ಜಂಪಿಂಗ್, ರನ್ನಿಂಗ್ ಇಷ್ಟವಾಗುತ್ತದೆ. ಅದಕ್ಕೆ ಹೆಚ್ಚು ಸಮಯ ನೀಡಿ. ಮನೆಯೊಳಗೆ ಸಣ್ಣ ಟ್ರೆಷರ್ ಹಂಟ್ ತಯಾರಿಸಿನೋಡಿ. ಟೈಮ್ ಪಾಸ್ ಆಗುತ್ತದೆ.

ಮಕ್ಕಳಿಗೆ ಕುಕ್ಕಿಂಗ್ನಲ್ಲಿ ಇಂಟ್ರೆಸ್ಟ್ ಇರಲಿ, ಇಲ್ಲದೇ ಇರಲಿ ಇದೊಂದು ಬೇಸಿಕ್ ಸ್ಕಿಲ್ಸ್ ಇದನ್ನು ಎಲ್ಲರೂ ಕಲಿತಿರಬೇಕು ಎಂದು ಹೇಳಿಕೊಡಿ. ಸಣ್ಣ ಪುಟ್ಟ ಸಹಾಯವನ್ನು ಅವರಿಂದ ಪಡೆಯಿರಿ. ಸಲಾಡ್ ಮಾಡುವುದು, ಹಾಲು ಕಾಯಿಸುವುದು, ತರಕಾರಿ ಮಿಕ್ಸ್ ಮಾಡುವುದು ಹೀಗೆ ಸಣ್ಣ ಕೆಲಸಗಳನ್ನು ನೀಡಿ.

ಮನೆಯಲ್ಲಿ ಕೇರಂ ಬೋರ್ಡ್, ಲುಡೋ, ಹಾವು ಏಣಿ, ಚೆಸ್, ಉನೋ ಕಾರ್ಡ್ಗಳು ಇರಲಿ. ಇದರಲ್ಲಿ ತಮ್ಮ ಆಯ್ಕೆಯ ಆಟಗಳನ್ನು ಆಡುತ್ತಾರೆ. ಸಮಯ ಇದ್ದಾಗ ನೀವು ಹೋಗಿ ಸೇರಿಕೊಳ್ಳಬಹುದು. ನಿಮ್ಮ ಫ್ಯಾಮಿಲಿ ಟೈಮ್ ಅದ್ಭುತವಾಗಿರುತ್ತದೆ.

ಮನೆಯಲ್ಲಿ ಗಿಡಗಳಿದ್ರೆ ಅದರ ಆರೈಕೆ, ಹೊಸ ಗಿಡಗಳನ್ನು ನೆಡುವುದು ಇನ್ನಿತರ ಕೆಲಸಗಳನ್ನು ಮಾಡಿಸಿ. ಆರ್ಟ್ ಹಾಗೂ ಕ್ರಾಫ್ಟ್ ಕೆಲಸಗಳು ಅವರಿಗೆ ಇಷ್ಟ. ಜೊತೆಗೆ ಮಕ್ಕಳಿಗೆ ರಾತ್ರಿ ಒಂದು ಬಾರಿ ಹಾಗೂ ರಾತ್ರಿ ಒಂದು ಬಾರಿ ಒಂದೆರಡು ಪುಟವಾದರೂ ಪರವಾಗಿಲ್ಲ ಪುಸ್ತಕ ಓದುವ ಅಭ್ಯಾಸ ಮಾಡಿಸಿ. ಇದು ಮುಂದೆ ತುಂಬಾ ಸಹಾಯ ಆಗುತ್ತದೆ.

ದಸರಾ ರಜೆಯನ್ನು ಸಜೆ ಎಂದು ತಿಳಿದುಕೊಳ್ಳಬೇಡಿ. ಇಂದು ಪುಟಾಣಿ ಇರುವ ಮಕ್ಕಳು ಒಂದು ವರ್ಷದಲ್ಲಿ ದೊಡ್ಡವರಾಗಿಬಿಡುತ್ತಾರೆ, ಬರುಬರುತ್ತಾ ನಿಮ್ಮ ಕಂಪನಿಗಿಂತ ಸ್ನೇಹಿತರೇ ಹೆಚ್ಚು ಇಷ್ಟವಾಗುತ್ತದೆ. ಮಕ್ಕಳ ಬಾಲ್ಯವನ್ನು ರೂಪಿಸುವ ಅದೃಷ್ಟ ನಿಮಗೆ ಸಿಕ್ಕಿರುವಾಗ ಅದನ್ನು ಸಜೆ ಅಂದುಕೊಂಡ್ರೆ ಹೇಗೆ!!



