October 8, 2026
Thursday, October 8, 2026

ಇಡೀ ದಿನದ ಕೆಲಸದ ನಂತರ ಮೊಣಕಾಲು ನೋವೇಕೆ ಕಾಡುತ್ತದೆ? ಇದರ ಹಿಂದಿನ ಅಸಲಿ ರಹಸ್ಯ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಿನ ಕಾಲದಲ್ಲಿ ವಯಸ್ಸಾದವರಿಂದ ಹಿಡಿದು ಜಿಮ್‌ಗೆ ಹೋಗುವ ಯುವಕರವರೆಗೆ ಎಲ್ಲರನ್ನೂ ಕಾಡುವ ಮುಖ್ಯ ಸಮಸ್ಯೆ ಎಂದರೆ ಸಂಜೆಯಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಮೊಣಕಾಲು ನೋವು. ಇಡೀ ದಿನ ಕೆಲಸ ಮಾಡಿ ಮನೆಗೆ ಮರಳುವಾಗ ‘ಅಯ್ಯೋ’ ಎಂದು ಕಾಲೂರಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗುತ್ತದೆ. ದಿನದ ಕೊನೆಯಲ್ಲಿ ಈ ಮೊಣಕಾಲು ನೋವು ಏಕೆ ಬರುತ್ತದೆ ಮತ್ತು ಇದನ್ನು ಹೇಗೆ ತಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ಮುಖ್ಯ ಕಾರಣಗಳು

ನಮ್ಮ ಇಡೀ ದೇಹದ ತೂಕವನ್ನು ಹೊರಲು ಮೊಣಕಾಲುಗಳೇ ಮುಖ್ಯ ಆಧಾರ. ಇಡೀ ದಿನ ನಿಂತುಕೊಂಡು ಕೆಲಸ ಮಾಡುವುದು, ಮೆಟ್ಟಿಲುಗಳನ್ನು ಹತ್ತುವುದು ಅಥವಾ ದಿನಪೂರ್ತಿ ಒಂದೇ ಕಡೆ ಕುಳಿತುಕೊಳ್ಳುವುದು ಮೊಣಕಾಲಿನ ಕೀಲುಗಳ ಮೇಲೆ ವಿಪರೀತ ಒತ್ತಡ ಹೇರುತ್ತದೆ.

ಕೀಲುಗಳ ಮಧ್ಯೆ ‘ಸಿಮೆಂಟಿಂಗ್’ ತರಹ ಕೆಲಸ ಮಾಡುವ ಕಾರ್ಟಿಲೇಜ್ ದಿನವಿಡೀ ಸತತ ಚಲನೆಯಿಂದಾಗಿ ದಣಿಯುತ್ತದೆ. ಇದರಿಂದಾಗಿ ಸಂಜೆಯ ಹೊತ್ತಿಗೆ ಕೀಲುಗಳಲ್ಲಿ ಉರಿ ಮತ್ತು ನೋವು ಹೆಚ್ಚಾಗುತ್ತದೆ.

ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು ಹಾಗೂ ಸರಿಯಾದ ಬೆಂಬಲ ನೀಡದ ಚಪ್ಪಲಿ ಅಥವಾ ಶೂಗಳನ್ನು ಧರಿಸುವುದು ಮೊಣಕಾಲಿನ ಜೋಡಣೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.

ದೇಹದಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ನೀರನಾಂಶದ ಕೊರತೆ ಇದ್ದರೆ, ಮೂಳೆ ಹಾಗೂ ಸ್ನಾಯುಗಳು ಬೇಗನೇ ದಣಿದು ನೋವು ಕಾಣಿಸಿಕೊಳ್ಳುತ್ತದೆ.

ಸರಳ ಉಪಾಯಗಳು

ದಿನವಿಡೀ ಒಂದೇ ಭಂಗಿಯಲ್ಲಿ ನಿಲ್ಲಬೇಡಿ ಅಥವಾ ಕುಳಿತುಕೊಳ್ಳಬೇಡಿ. ಪ್ರತಿ ಅರ್ಧ ಗಂಟೆಗೊಮ್ಮೆ ನಡೆದಾಡಿ.

ನಿಮ್ಮ ಪಾದಕ್ಕೆ ಮೆತ್ತಗಿನ ಬೆಂಬಲ ನೀಡುವ ಪಾದರಕ್ಷೆಗಳನ್ನು ಆಯ್ಕೆ ಮಾಡಿ.

ಹಾಲಿನ ಉತ್ಪನ್ನಗಳು, ರಾಗಿ ಹಾಗೂ ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ.

ಕಾಲಕಾಲಕ್ಕೆ ವ್ಯಾಯಾಮ ಮತ್ತು ಸರಿಯಾದ ಜೀವನಶೈಲಿ ಅಳವಡಿಸಿಕೊಂಡರೆ ಸಂಜೆಯ ಹೊತ್ತಿನ ಮೊಣಕಾಲು ನೋವಿಗೆ ಸುಲಭವಾಗಿ ಮುಕ್ತಿ ನೀಡಬಹುದು.

Must Read