ಹೊಸದಿಗಂತ ವರದಿ ಬೆಳಗಾವಿ:
ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಟಚ್ ಆಯಿತು ಎಂಬ ಕಾರಣಕ್ಕೆ ಬಸ್ ಚಾಲಕನನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಬೆಳಗಾವಿಯ ಹೊರವಲಯದಲ್ಲಿ ನಡೆದಿದೆ.
ಬೈಕ್ ಸವಾರ ಬಸ್ಸನ್ನು ಅಡ್ಡಗಟ್ಟಿ, ರಸ್ತೆ ಮಧ್ಯೆಯೇ ಬೈಕ್ ನಿಲ್ಲಿಸಿ ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾನೆ. ಬಳಿಕ ಹೆಲ್ಮೆಟ್ನಿಂದ ಬಸ್ಸಿನ ಗಾಜಿಗೆ ಹೊಡೆದು ಹಾನಿ ಮಾಡಲು ಯತ್ನಿಸಿ, ಚಾಲಕನ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಸ್ಥಳೀಯ ಕೆಲ ಯುವಕರನ್ನು ಕರೆಸಿಕೊಂಡು ಚಾಲಕನ ಮೇಲೆ ಹಲ್ಲೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.
ಚಾಲಕನ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ನಡೆಯುತ್ತಿದ್ದರೂ, ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಮೂಕಪ್ರೇಕ್ಷಕರಾಗಿ ನಿಂತಿದ್ದರು ಎನ್ನಲಾಗಿದೆ. ಜಗಳ ಬಿಡಿಸಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ, ಜೀವ ಉಳಿಸಿಕೊಳ್ಳುವ ಸಲುವಾಗಿ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ:
ಘಟನೆಯ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.



