ಹೊಸದಿಗಂತ ವರದಿ ದಾಂಡೇಲಿ:
ಛಲವೊಂದಿದ್ದರೆ ಎಂತಹ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ದಾಂಡೇಲಿಯ ಬೈಕ್ ರೈಡರ್ ನೀಲೇಶ್ ಪಿ. ಸ್ವಾಮಿ ಸಾಕ್ಷಿಯಾಗಿದ್ದಾರೆ. ಬರೋಬ್ಬರಿ 28 ದಿನಗಳಲ್ಲಿ 10,151 ಕಿ.ಮೀ. ಬೈಕ್ ಸವಾರಿ ಮಾಡಿ, ದೇಶದ 12 ಜ್ಯೋತಿರ್ಲಿಂಗಗಳು ಹಾಗೂ ನಾಲ್ಕು ಧಾಮಗಳ ದರ್ಶನ ಪೂರ್ಣಗೊಳಿಸಿ ತವರಿಗೆ ಮರಳಿದ್ದಾರೆ.
ದಾಂಡೇಲಿಯ ಬಂಗೂರನಗರ ನಿವಾಸಿಯಾಗಿರುವ ಕಾರ್ಪೊರೇಟ್ ಉದ್ಯಮಿ ನೀಲೇಶ್ ಪಿ. ಸ್ವಾಮಿ, ಕಳೆದ ಅಕ್ಟೋಬರ್ 25ರಂದು ತಮ್ಮ ಬೈಕ್‌ನಲ್ಲಿ ಈ ಸಾಹಸಮಯ ಯಾತ್ರೆ ಆರಂಭಿಸಿದ್ದರು. ದೇಶದ ವಿವಿಧ ರಾಜ್ಯಗಳ ಮೂಲಕ ಸಂಚರಿಸಿದ ಅವರು, ದೀರ್ಘ ಪ್ರಯಾಣ, ಬದಲಾಗುವ ಹವಾಮಾನ ಹಾಗೂ ಏಕಾಂಗಿ ಬೈಕ್ ಸವಾರಿಯ ಹಲವು ಸವಾಲುಗಳನ್ನು ಎದುರಿಸಿ ತಮ್ಮ ಗುರಿ ತಲುಪಿದ್ದಾರೆ.
ಈ ಯಾತ್ರೆಯಲ್ಲಿ ಭಾರತದ 12 ಜ್ಯೋತಿರ್ಲಿಂಗಗಳ ದರುಶನ ಪಡೆದ ಅವರು, ಬದರಿನಾಥ, ದ್ವಾರಕಾ, ಪುರಿ ಹಾಗೂ ರಾಮೇಶ್ವರಂ ಸೇರಿದಂತೆ ಚಾರ್ ಧಾಮ್ ಯಾತ್ರೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಧಾರ್ಮಿಕ ಭಕ್ತಿಯ ಜೊತೆಗೆ ಸಾಹಸ ಮತ್ತು ಪ್ರವಾಸದ ಆಸಕ್ತಿಯನ್ನು ಬೆಸೆದ ಈ ಪ್ರಯಾಣ ಅವರ ಪಾಲಿಗೆ ಸ್ಮರಣೀಯ ಅನುಭವವಾಗಿದೆ.
ಇದನ್ನೂ ಓದಿ:
28 ದಿನಗಳ ಸುದೀರ್ಘ ಯಾತ್ರೆ ಮುಗಿಸಿ ದಾಂಡೇಲಿಗೆ ವಾಪಸಾದ ನೀಲೇಶ್ ಅವರನ್ನು ಕುಟುಂಬಸ್ಥರು, ಸ್ನೇಹಿತರು ಹಾಗೂ ಬೈಕ್ ಸವಾರರು ಆತ್ಮೀಯವಾಗಿ ಬರಮಾಡಿಕೊಂಡರು.
ಭಕ್ತಿ, ಸಾಹಸ ಮತ್ತು ಅಚಲ ಛಲದ ಸಂಗಮವಾಗಿರುವ ನೀಲೇಶ್ ಅವರ ಈ ಸಾಧನೆ ದಾಂಡೇಲಿಯ ಯುವಕರಿಗೆ ಹೊಸ ಸ್ಫೂರ್ತಿಯಾಗಿದ್ದು, ಕನಸುಗಳನ್ನು ನನಸಾಗಿಸಲು ಧೈರ್ಯ ಮತ್ತು ಪರಿಶ್ರಮ ಎಷ್ಟು ಮುಖ್ಯ ಎಂಬುದನ್ನು ಸಾರಿದೆ.



