ಹೊಸದಿಗಂತ ಡಿಜಿಟಲ್ ಡೆಸ್ಕ್:
CEC ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಿರೋಧ ಪಕ್ಷಗಳ ಹೋರಾಟ ಈಗ ಮತ್ತಷ್ಟು ತೀವ್ರಗೊಂಡಿದೆ. ದೆಹಲಿಯ ಜಂತರ್ ಮಂತರ್ ಬಳಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಬೆನ್ನಲ್ಲೇ, ‘ಇಂಡಿಯಾ’ ಒಕ್ಕೂಟದ ಸಂಸದರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಮಹಾತ್ಮಾ ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್‌ಘಾಟ್‌ಗೆ ಧಾವಿಸಿದ್ದಾರೆ.
ಮೋದಿ-ಶಾಗೆ ಸದ್ಬುದ್ಧಿ ಬರಲಿ ಎಂದು ಪ್ರಾರ್ಥನೆ
ಕನ್ನಾಟ್ ಪ್ಲೇಸ್‌ನಲ್ಲಿ ನಡೆದ ಜಂಟಿ ಸಭೆಯ ಬಳಿಕ ಸಂಸದರೆಲ್ಲರೂ ಶಾಂತಿಯುತ ಧರಣಿಗಾಗಿ ರಾಜ್‌ಘಾಟ್‌ಗೆ ಆಗಮಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ. ಇದನ್ನು ಅವರಿಗೆ ಮನವರಿಕೆ ಮಾಡಿಕೊಡಲು, ಅವರಿಗೆ ಸದ್ಬುದ್ಧಿ ನೀಡಲಿ ಎಂದು ನಾವು ಗಾಂಧಿ ಸ್ಮಾರಕದ ಮುಂದೆ ಜಂಟಿ ಪ್ರಾರ್ಥನೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು. ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಮಾತನಾಡಿ, ಸಂವಿಧಾನ ಮತ್ತು ದೇಶದ ಜನರನ್ನು ರಕ್ಷಿಸಲು ನಾವು ಗಾಂಧಿ ಮಾರ್ಗದಲ್ಲಿ ಶಾಂತಿಯುತ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದರು.
ಸಂಸದರ ಮೇಲಿನ ಹಲ್ಲೆಗೆ ರಾಹುಲ್ ಗಾಂಧಿ ಆಕ್ರೋಶ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಚುನಾವಣಾ ಆಯೋಗದ ಕಚೇರಿ ಹಾಗೂ ಜಂತರ್ ಮಂತರ್ ಹೊರಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಂದಿದ್ದ ಸುಮಾರು 300 ಕ್ಕೂ ಹೆಚ್ಚು ಸಂಸದರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಜನಪ್ರತಿನಿಧಿಗಳ ಮೇಲೆ ಪೊಲೀಸರು ಹಲ್ಲೆ ಕೂಡ ನಡೆಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಈ ಪ್ರತಿಭಟನೆಯಲ್ಲಿ ಕೇವಲ ಮತದಾರರ ಪಟ್ಟಿ ಅಕ್ರಮ ಮಾತ್ರವಲ್ಲದೆ, ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಭೀಕರ ಬೆಲೆ ಏರಿಕೆ ಹಾಗೂ ಸಾಂವಿಧಾನಿಕ ಹಕ್ಕುಗಳ ದಮನದ ವಿರುದ್ಧವೂ ಧ್ವನಿ ಎತ್ತಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ರಾಜ್‌ಘಾಟ್ ಸುತ್ತ ಬಿಗಿ ಬಂದೋಬಸ್ತ್
ವಿರೋಧ ಪಕ್ಷಗಳ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಡೀ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಚುನಾವಣಾ ಆಯೋಗದ ಕಚೇರಿ ಹಾಗೂ ರಾಜ್‌ಘಾಟ್ ಗಾಂಧಿ ಸ್ಮಾರಕದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.



