October 8, 2026
Thursday, October 8, 2026
spot_img

ಮೆಥಾಂಫೆಟಮೈನ್ ಮಾರಾಟ| ಯುವಕ‌ ಅರೆಸ್ಟ್: ₹65 ಸಾವಿರ ಮೌಲ್ಯದ ವಸ್ತು ಜಪ್ತಿ

ಹೊಸದಿಗಂತ ವರದಿ ಬೆಳಗಾವಿ:

ಮೆಥಾಂಫೆಟಮೈನ್ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಯುವಕನೋರ್ವನನ್ನು ಬಂಧಿಸಿ, ₹45 ಸಾವಿರ ಮೌಲ್ಯದ ಮೆಥಾಂಫೆಟಮೈನ್ ಹಾಗೂ ₹20 ಸಾವಿರ ಮೌಲ್ಯದ ಹೊಂಡಾ ಆಕ್ಟಿವಾ ಸ್ಕೂಟರ್‌ನ್ನು ಜಪ್ತಿ ಮಾಡಿದ್ದಾರೆ.

ಬಂಧಿತನನ್ನು ಶಾಸ್ತ್ರಿನಗರ ನಿವಾಸಿ ಸತ್ಯಂ ಸಂತೋಷ ಕಾವೇಟಿಯಾ (21) ಎಂದು ಗುರುತಿಸಲಾಗಿದೆ.

ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಸಮರ್ಥನಗರದ ಬಳ್ಳಾರಿ ನಾಲಾ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಸತ್ಯಂ ಸಂತೋಷ ಕಾವೇಟಿಯಾನನ್ನು ವಶಕ್ಕೆ ಪಡೆಯಲಾಯಿತು.

ಆರೋಪಿ ತನ್ನ ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಮೇಲೆ ‘PRESS’ ಎಂದು ಬರೆಸಿಕೊಂಡಿದ್ದ. ಸ್ಕೂಟರ್ನ ಡಿಕ್ಕಿಯಲ್ಲಿ ಮೆಥಾಂಫೆಟಮೈನ್ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಆರೋಪಿಯಿಂದ ₹45 ಸಾವಿರ ಮೌಲ್ಯದ ಮೆಥಾಂಫೆಟಮೈನ್ ಹಾಗೂ ₹20 ಸಾವಿರ ಮೌಲ್ಯದ ಹೊಂಡಾ ಆಕ್ಟಿವಾ ಸ್ಕೂಟರ್ ಸೇರಿ ಒಟ್ಟು ₹65 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 221/2026ರಡಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(c), 22(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Must Read