ಮಲೆನಾಡು ಶಿವಮೊಗ್ಗ ಭಾಗದಲ್ಲಿ ಬೀಗರೂಟಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮದುವೆ ಹೇಗೆ ನಡೆಯಿತು? ಮದುವೆ ಊಟ ಹೇಗಿತ್ತು? ಹುಡುಗ ಹುಡುಗಿ ಹೇಗಿದ್ದರು? ಅನ್ನೋದಕ್ಕಿಂತ ಬೀಗರೂಟ ಹೇಗಿತ್ತು ಅನ್ನೋದೇ ಮುಖ್ಯವಾದ ಪ್ರಶ್ನೆಯಾಗಿದೆ. ಹೌದು, ಬೀಗರೂಟದಲ್ಲಿ ಮಟನ್, ಚಿಕನ್, ಮೀನು ಎಲ್ಲವೂ ಇರಬೇಕು, ಅದರಲ್ಲಿಯೂ ಅಡುಗೆ ಹೇಗಿತ್ತು? ವೆರೈಟಿ ಎಷ್ಟಿತ್ತು ಎಂದು ಜನ ಕೇಳುತ್ತಾರೆ.
ದುಡ್ಡಿರುವವರಿಗೆ ಇದು ದೊಡ್ಡ ವಿಷಯ ಅಲ್ಲ, ಜನ ಸಾಕಪ್ಪಾ ಸಾಕು ಎನಿಸುವಷ್ಟು ಬಾಡು ಬಡಿಸಿ ತೃಪ್ತಿಪಡಿಸುತ್ತಾರೆ. ಆದರೆ ಮಿಡಲ್ ಕ್ಲಾಸ್ ಜನ ತೋರಿಕೆಗಾಗಿ ಸಾಲ ಮಾಡಿಯಾದ್ರೂ ಬೀಗರೂಟ ಹಾಕಿಸಿ ತದನಂತರ ವರ್ಷಾನುಗಟ್ಟಲೆ ಸಾಲ ತೀರಿಸುತ್ತಾರೆ. ಅದ್ಧೂರಿಯಾಗಿ ನಡೆಯುವ ಬೀಗರೂಟ ಕಾರ್ಯಕ್ಕೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮ ಸಂಪೂರ್ಣವಾಗಿ ಬ್ರೇಕ್ ಹಾಕಿದೆ.
ಆರ್ಥಿಕ ಹೊರೆ ಮಾಡಿಕೊಂಡು ಇತರರನ್ನು ತೃಪ್ತಿಪಡಿಸುವ ಪದ್ಧತಿ ನಿಷೇಧವಾಗಲೆಂದು ಬೀಗರೂಟ ಕಾರ್ಯಕ್ರಮ ಏರ್ಪಾಡು ಮಾಡುವುದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಊರಿನಲ್ಲಿ ಬಹುತೇಕರು ಈಡಿಗ ಸಮುದಾಯಕ್ಕೆ ಸೇರಿದ್ದಾರೆ. ಈ ಸಮುದಾಯದಲ್ಲಿ ಮದುವೆಯ ನಂತರ ಅದ್ಧೂರಿ ಬೀಗರೂಟ ಮಾಡಿಸಲಾಗುತ್ತದೆ. ಈ ಹಿಂದೆ ಬರೀ ಮನೆಮಂದಿಗೆ ಮಾತ್ರ ಈ ಊಟ ಮಾಡಲಾಗುತ್ತಿತ್ತು. ಆದರೆ ಇದೀಗ ದೊಡ್ಡ ಟ್ರೆಂಡ್ ಆಗಿ ನೂರಾರು ಮಂದಿಯನ್ನು ಬೀಗರೂಟಕ್ಕೆ ಕರೆಯಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ.
ಗ್ರಾಮಸ್ಥರ ಒಗ್ಗಟ್ಟಿನ ನಿರ್ಧಾರ
ಈಗ ಜನರ ಜೀವನ ಅಂದುಕೊಂಡಂತೆ ಇಲ್ಲ. ಕೃಷಿಯ ಮೇಲೆ ಅವಲಂಬಿತರಾಗಿರುವ ಜನ ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಬೇರೆ ಊರಿನಲ್ಲಿ ಸಿಗುವ ಕೆಲಸಗಳು ಇಂದು ಇರುತ್ತವೆ ನಾಳೆಗೆ ಹೋಗುತ್ತವೆ. ಈ ರೀತಿ ಇರುವಾಗ ಇಲ್ಲದ್ದನ್ನು ತೋರಿಸಿಕೊಳ್ಳುವ ಪದ್ಧತಿ ಬೇಡವೆಂದು ಇಡೀ ಗ್ರಾಮದಜನ ಒಗ್ಗಟ್ಟಿನಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.
ಒಂದು ಲಕ್ಷ ರೂಪಾಯಿ ದಂಡ
ಎಲ್ಲರೂ ಕೂಡಿ ಈ ನಿರ್ಧಾರ ಮಾಡಿದ್ದಾಗಿದೆ. ಇದನ್ನು ಮೀರಿಯೂ ಯಾರಾದರೂ ಬೀಗರೂಟ ಏರ್ಪಡಿಸಿದ್ದು ಕಂಡುಬಂದಲ್ಲಿ ಅವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಇಷ್ಟೇ ಅಲ್ಲ, ಬೇರೆಯವರ ಬೀಗರೂಟಕ್ಕೆ ಹೋಗಿ ಬಾಡು ತಿಂದು ಬಂದರೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಕಠಿಣ ನಿಯಮದ ಮೂಲಕ ಆರ್ಥಿಕ ಶಿಸ್ತು ತರಲು ಗ್ರಾಮಸ್ಥರು ಮುಂದಾಗಿದ್ದಾರೆ.
ಎಲ್ಲೆಡೆ ಮೆಚ್ಚುಗೆ
ಈ ಊರಿನ ಜನ ಬೀಗರೂಟ ಎನ್ನುವ ಕಾನ್ಸೆಪ್ಟ್ನ್ನೇ ವಿರೋಧಿಸಿದ್ದಾರೆ. ನಿಮ್ಮ ಬೀಗರನ್ನು ಮನೆಗೆ ಕರೆದು ಒಂದು ಕೆಜಿ ಮಟನ್ ತಂದು ಅಡುಗೆ ಮಾಡಿದರೆ ಅದು ನಿಮಗೆ ತೃಪ್ತಿ ನೀಡೋದಿಲ್ವೆ? ಊರೆಲ್ಲಾ ಕರೆದು ಹಣ ವೇಸ್ಟ್ ಮಾಡುವುದು ಯಾಕೆ ಎಂದು ಗ್ರಾಮಸ್ಥರು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. ನಮಗೆ ಮದುವೆ ಮಾಡುವುದೇ ಆರ್ಥಿಕ ಹೊರೆಯಾಗುತ್ತದೆ, ಮದುವೆಯ ನಂತರ ಬೀಗರೂಟಕ್ಕೆ ಯಾರು ಹಣ ವ್ಯರ್ಥ ಮಾಡುತ್ತಾರೆ. ಎಲ್ಲರೂ ಮಾತನಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಊರಿನವರು ಹೇಳಿದ್ದಾರೆ.



