October 8, 2026
Thursday, October 8, 2026
spot_img

ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಗದ್ದಲ: ಮೇಯರ್-ಉಪಮೇಯರ್ ಆಹ್ವಾನಕ್ಕೆ ಕನ್ನಡಪರ ಸಂಘಟನೆಗಳ ವಿರೋಧ

ಹೊಸದಿಗಂತ ವರದಿ ಬೆಳಗಾವಿ:

ನಂ.1 ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅವರನ್ನು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳ ನಡುವೆ ಗದ್ದಲ ಉಂಟಾಯಿತು.

ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಡಿ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಅಧ್ಯಕ್ಷ ವಾಜೀದ್ ಹಿರೇಕುಂಡಿ ಅವರು ಮೇಯರ್ ಹಾಗೂ ಉಪಮೇಯರ್ ಅವರನ್ನು ರಾಜ್ಯೋತ್ಸವಕ್ಕೆ ಆಹ್ವಾನಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಇಬ್ಬರೂ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಬಲರಾಮ್ ಮಾಸೇನಟ್ಟಿ ಹಾಗೂ ವಾಜೀದ್ ಹಿರೇಕುಂಡಿ ಸಭೆಯಿಂದ ಹೊರಗೆ ನಡೆದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಧ್ಯಪ್ರವೇಶಿಸಿ, ಸಭೆಯಿಂದ ಹೊರಗೆ ತೆರಳಿದ್ದ ಇಬ್ಬರೂ ಮುಖಂಡರನ್ನು ಮರಳಿ ಸಭೆಗೆ ಬಂದು ಕುಳಿತುಕೊಳ್ಳುವಂತೆ ಮನವಿ ಮಾಡಿದರು.

“ರಾಜ್ಯೋತ್ಸವದ ಸಭೆ ಯಾರ ವೈಯಕ್ತಿಕ ಸಭೆಯಲ್ಲ. ಇದು ಹೆಮ್ಮೆಯ ಬೆಳಗಾವಿಯ ರಾಜ್ಯೋತ್ಸವದ ಸಭೆ. ಈ ಬಾರಿ ನಡೆಯಲಿರುವ ರಾಜ್ಯೋತ್ಸವವನ್ನು ಇಡೀ ರಾಜ್ಯವೇ ಗಮನಿಸಲಿದೆ. ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಬೇಕಿದೆ. ಕನ್ನಡದ ವಿಚಾರದಲ್ಲಿ ಗೊಂದಲ ಉಂಟಾಗಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ನಾವೆಲ್ಲರೂ ಒಂದೇ” ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಇದನ್ನೂ ಓದಿ:

“ಹೋರಾಟ ಮಾಡುವಾಗ ಹೋರಾಟ ಮಾಡಿ. ಆದರೆ ರಾಜ್ಯೋತ್ಸವದ ವಿಚಾರದಲ್ಲಿ ಎಲ್ಲರೂ ಶಾಂತವಾಗಿರಬೇಕು. ಇಲ್ಲಿ ಎಲ್ಲರೂ ಕನ್ನಡಿಗರು. ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ನಿಮ್ಮೊಂದಿಗೆ ಇದ್ದೇವೆ. ನಮ್ಮ ಕನ್ನಡಿಗರಲ್ಲಿಯೇ ಭೇದಭಾವ ಬೇಡ. ಎಲ್ಲರೂ ಒಗ್ಗಟ್ಟಿನಿಂದ ಸೇರಿ ಈ ಬಾರಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸೋಣ” ಎಂದು ಅವರು ಕರವೇ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

Must Read