ಹೊಸದಿಗಂತ ವರದಿ ಕಾರವಾರ:
ಭಾರತೀಯ ಕೋಸ್ಟ್ ಗಾರ್ಡ್ ಗೆ ಸೇರಿರುವ ಎರಡು ಅತ್ಯಾಧುನಿಕ ಹೋವರ್ ಕ್ರಾಪ್ಟ್ ನೌಕೆಗಳು ನಗರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಲಂಗರು ಹಾಕಿದ್ದು ಎರಡು ದಿನಗಳಿಂದ ಜನರನ್ನು ಸೆಳೆಯುತ್ತಿದೆ.
ನೀರು ಮತ್ತು ಮರಳಿನ ಮೇಲೆ ಚಲಿಸುವ ಸಾಮರ್ಥ್ಯ ಹೊಂದಿರುವ ಈ ವಿಶೇಷ ನೌಕೆಗಳು ಕಾರವಾರ ಕಡಲ ತೀರಕ್ಕೆ ಆಗಮಿಸಿರುವುದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.

ಹಡಗುಗಳು ಚಲಿಸಲಾಗದಂತ ಆಳವಿಲ್ಲದ ಜಲಪ್ರದೇಶ ಮತ್ತು ಒಣ ಭೂಮಿ, ಸಮುದ್ರ ತೀರದ ಮರಳ ಮೇಲೆ ಸಹ ಈ ನೌಕೆಗಳು ಚಲಿಸಬಲ್ಲವು.
ಕರಾವಳಿ ಗಸ್ತು ಕಾರ್ಯದ ಮೇಲೆ ಗೋವಾದಿಂದ ಆಗಮಿಸಿರುವ ನೌಕೆಗಳು ಕಾರವಾರದಲ್ಲಿ ಸಿಬ್ಬಂದಿಗಳ ವಿಶ್ರಾಂತಿಯ ಉದ್ದೇಶದಿಂದ ತಂಗಿವೆ ಎಂದು ಹೇಳಲಾಗುತ್ತಿದ್ದರೂ ಕೋಸ್ಟ್ ಗಾರ್ಡನ ಹಿರಿಯ ಅಧಿಕಾರಿಯೋರ್ವರ ಭೇಟಿಯ ಹಿನ್ನೆಲೆಯಲ್ಲಿ ಈ ನೌಕೆಗಳು ಆಗಮಿಸಿವೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಕರಾವಳಿಯಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆ ನಡೆಯುತ್ತಿದ್ದು ಕರಾವಳಿ ತೀರದ ಭದ್ರತೆಯ ಉದ್ದೇಶದಿಂದ ಕೋಸ್ಟ ಗಾರ್ಡಿನ ಹೋವರ್ ಕ್ರಾಪ್ಟ್ ಗಳು ಆಗಮಿಸಿವೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ:
ಕಾರವಾರ ಸುತ್ತ ಮುತ್ತಲಿನ ಜನರಿಗೆ ಮತ್ತು ಪ್ರವಾಸಿಗರಿಗೆ ಈ ಹೋವರ್ ಕ್ರಾಪ್ಟ್ ವಿಶೇಷ ಆಕರ್ಷಣೆಯಾಗಿದ್ದು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅತ್ಯಾಧುನಿಕ ನೌಕೆಗಳನ್ನು ವೀಕ್ಷಿಸಿದರು.



