ಹೊಸದಿಗಂತ ವರದಿ ಬನವಾಸಿ:
ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಶ್ರೀಗಂಧ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬನವಾಸಿ ಸಮೀಪದ ಗೋಳಿಕಟ್ಟಾ ಗ್ರಾಮದ ಅರಣ್ಯ ಸರ್ವೆ ನಂ.20ರಲ್ಲಿ ಅನಧಿಕೃತವಾಗಿ ಶ್ರೀಗಂಧದ ಮರಗಳನ್ನು ಕಡಿದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಟೋಬರ್ 8 ರಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಶ್ರೀಗಂಧದ ಬುಡಚಿಗಳು ಹಾಗೂ ಹಸಿ ಸಿಪ್ಪೆ ಸಹಿತ ಒಟ್ಟು 77.610 ಕೆ.ಜಿ. ತೂಕದ ಶ್ರೀಗಂಧವನ್ನು ಇಲಾಖಾ ವಶಕ್ಕೆ ಪಡೆದು ಜಪ್ತಿ ಮಾಡಲಾಗಿದೆ.
ಪ್ರಕರಣದ ತನಿಖೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆಯ ವಿವಿಧ ಕಲಂಗಳು ಹಾಗೂ ಕರ್ನಾಟಕ ಅರಣ್ಯ ನಿಯಮಗಳ ಉಲ್ಲಂಘನೆ ದೃಢಪಟ್ಟ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಉಂಬಳೇಕೊಪ್ಪ ನಿವಾಸಿಗಳಾದ ಸಂತೋಷ ಸಣ್ಯಾ ನಾಯ್ಕ (35), ನವೀನ ಚಂದ್ರಶೇಖರ ದೇವಾಡಿಗ (30), ಸಹಸ್ರಳ್ಳಿ ನಿವಾಸಿ ಮಂಜುನಾಥ ಮಾದೇವ ಗೌಡ (39) ಹಾಗೂ ಮುಂಡಿಗೆಹಳ್ಳಿ ನಿವಾಸಿ ಜನಾರ್ಧನ ಗಣಪತಿ ಗೌಡ (29) ಎಂದು ಅರಣ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ:
ಕಾರ್ಯಾಚರಣೆಯನ್ನು ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ ಹಾಗೂ ಶಿರಸಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಕಾರ್ತಿಕ ಕಂಬಳಿ ಅವರ ನೇತೃತ್ವದಲ್ಲಿ ನಡೆಸಲಾಗಿದೆ.
ಉಪ ವಲಯ ಅರಣ್ಯಾಧಿಕಾರಿ ಪ್ರೇಮಕುಮಾರ ಕಾರಭಾರಿ, ಗಸ್ತು ಅರಣ್ಯ ಪಾಲಕರಾದ ಸಂತೋಷ ಕಕ್ಕಳಮೇಲಿ, ರವಿ ಜಾಡರ, ಬಸನಗೌಡ ಹಾಲಗಿ ಹಾಗೂ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರ ಹೆಚ್.ಎಸ್. ಈಶ್ವರಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



