ಹೊಸದಿಗಂತ ಡಿಜಿಟಲ್ ಡೆಸ್ಕ್;
ಜಮ್ಮು ಮತ್ತು ಕಾಶ್ಮೀರದ ನೆಲದಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಉಗ್ರ ಲತೀಫ್ ಭಟ್ ಹತ್ಯೆಯ ಬೆನ್ನಲ್ಲೇ, ಇದೀಗ ಕಣಿವೆ ನಾಡಿನಲ್ಲಿ ಅಡಗಿರುವ ಸುಮಾರು 65 ಪಾಕಿಸ್ತಾನಿ ಭಯೋತ್ಪಾದಕರನ್ನು ಸದೆಬಡಿಯಲು ಭದ್ರತಾ ಪಡೆಗಳು ಬೃಹತ್ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಗುಪ್ತಚರ ಇಲಾಖೆಗಳ ಖಚಿತ ಮಾಹಿತಿಯ ಆಧಾರದ ಮೇಲೆ ಈ 65 ವಿದೇಶಿ ಉಗ್ರರ ಚಲನವಲನಗಳ ಮೇಲೆ ಭದ್ರತಾ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿವೆ. ಇವರಲ್ಲಿ 35 ಮಂದಿ ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಹಾಗೂ 25 ಮಂದಿ ಜೈಶ್-ಎ-ಮೊಹಮ್ಮದ್ (JeM) ಸಂಘಟನೆಗೆ ಸೇರಿದವರಾಗಿದ್ದು, ಉಳಿದವರು ಇತರ ಉಗ್ರಗಾಮಿ ಗುಂಪುಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯಕ್ಕೆ ಇಳಿಕೆ
ನವೆಂಬರ್ 18ರಂದು ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎಂಟು ದಿನಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಲಷ್ಕರ್ ಸಂಘಟನೆಯ ಕೊನೆಯ ಸ್ಥಳೀಯ ಉಗ್ರ ಲತೀಫ್ ಭಟ್ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯ ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. 2022ರಲ್ಲಿ 135 ಉಗ್ರರು ಸಕ್ರಿಯವಾಗಿದ್ದರೆ, 2024ರಲ್ಲಿ ಈ ಸಂಖ್ಯೆ 91ಕ್ಕೆ ಇಳಿದಿತ್ತು. ಇದೀಗ ಕೇವಲ 65 ಪಾಕಿಸ್ತಾನಿ ಉಗ್ರರು ಮಾತ್ರ ಉಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಜಮ್ಮುವಿನ ದಟ್ಟ ಅರಣ್ಯಗಳಲ್ಲಿ ಉಗ್ರರ ಅಡಗುತಾಣ
ಕಾಶ್ಮೀರ ಕಣಿವೆಯಲ್ಲಿ ಸ್ಥಳೀಯ ಉಗ್ರರ ನಿರ್ಮೂಲನೆಯಿಂದ ಭದ್ರತಾ ಪರಿಸ್ಥಿತಿ ಸುಧಾರಿಸಿದ್ದರೂ, ಜಮ್ಮು ವಿಭಾಗದ ದಟ್ಟ ಅರಣ್ಯ ಹಾಗೂ ದುರ್ಗಮ ಪರ್ವತ ಪ್ರದೇಶಗಳಾದ ಪೂಂಚ್, ರಾಜೌರಿ, ಕಿಶ್ತ್ವಾರ್ ಮತ್ತು ದೋಡಾ ಜಿಲ್ಲೆಗಳಲ್ಲಿ ಪಾಕಿಸ್ತಾನಿ ಉಗ್ರರು ಸಕ್ರಿಯವಾಗಿದ್ದಾರೆ. ಗಡಿ ನಿಯಂತ್ರಣ ರೇಖೆಯ ಮೂಲಕ ಒಳನುಸುಳುವ ಇವರಿಗೆ ಗಡಿಯಾಚೆಯಿಂದ ನೆರವು ಸಿಗುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ‘ಆಪರೇಷನ್ ತ್ರಾಶಿ-I’ ಅಡಿಯಲ್ಲಿ ಕಿಶ್ತ್ವಾರ್ನಲ್ಲಿ ಸೈಫುಲ್ಲಾ ನೇತೃತ್ವದ ಜೈಶ್ ಸಂಘಟನೆಯ ಏಳು ಉಗ್ರರನ್ನು ಸದೆಬಡಿದ ಮಾದರಿಯಲ್ಲೇ, ಇದೀಗ ಉಳಿದ 65 ಉಗ್ರರ ನಿರ್ಮೂಲನೆಗೆ ಬಹು-ಏಜೆನ್ಸಿ ಕಾರ್ಯಾಚರಣೆ ರೂಪಿಸಲಾಗಿದೆ.
ನವೆಂಬರ್ 18ರಂದು ಉಧಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು, “ಕೇಂದ್ರಾಡಳಿತ ಪ್ರದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ವಿದೇಶಿ ಉಗ್ರರು ಮಾತ್ರ ಉಳಿದಿದ್ದು, ಜಮ್ಮು ಮತ್ತು ಕಾಶ್ಮೀರ ಶೀಘ್ರದಲ್ಲೇ ಸಂಪೂರ್ಣ ಭಯೋತ್ಪಾದನೆ ಮುಕ್ತವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.



