ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್‌ಗೇಟ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದು, ಈತನಿಂದ ಆಂಫೆಟಮೈನ್ ಅಥವಾ ಮೆಥಾಂಫೆಟಮೈನ್ ಮಾದರಿಯ ಮಾದಕ ವಸ್ತು ಸಹಿತ ಒಟ್ಟು 1.93 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿದ್ದಾರೆ.
ಪುದು ಗ್ರಾಮದ ಅಮ್ಮೆಮಾರ್ ನಿವಾಸಿ, ಪ್ರಸ್ತುತ ಪರಂಗಿಪೇಟೆಯ ಟಿ.ಕೆ. ಪ್ಲ್ಯಾಟ್‌ನಲ್ಲಿ ವಾಸ್ತವ್ಯವಿರುವ ಅಶ್ರಫ್ ಯಾನೆ ಮೊಹಮ್ಮದ್ ಅಶ್ರಫ್ (48) ಬಂಧಿತ ಆರೋಪಿಯಾಗಿದ್ದಾನೆ.
ಕಪ್ಪು ಬಣ್ಣದ ಆಕ್ಟಿವಾದಲ್ಲಿ ಟೋಲ್ ಗೇಟ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡಲು ವ್ಯಕ್ತಿಯೊಬ್ಬ ಯತ್ನಿಸುತ್ತಿದ್ದ ಬಗ್ಗೆ ದೊರೆತ ಮಾಹಿತಿಯಾಧಾರದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಲ್ಲಿದ್ದ ವ್ಯಕ್ತಿ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದನೆನ್ನಲಾಗಿದೆ.
ತಕ್ಷಣ ಅತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ, ಆತ ಧರಿಸಿದ್ದ ಪ್ಯಾಂಟ್ ನ ಕಿಸೆಯಲ್ಲಿ ನಾಲ್ಕು ಹಾಗೂ ಸ್ಕೂಟರ್‌ನ ಸೀಟಿನಡಿಯಲ್ಲಿದ್ದ ಐದು ಪ್ಯಾಕೆಟ್‌ಗಳಲ್ಲಿ ಬಿಳಿ ಪುಡಿ ಪತ್ತೆಯಾಗಿದೆ. ಈತನನ್ನು ಮತ್ತಷ್ಟು ವಿಚಾರಣೆಗೆ ಗುರಿಪಡಿಸಿದಾಗ ತನ್ನ ಹೆಸರು ಅಶ್ರಫ್ ಹಾಗೂ ಮಾದಕ ವಸ್ತುಮಾರಾಟಕ್ಕಾಗಿ ತಂದಿರುವುದಾಗಿ ಒಪ್ಪಿದ್ದಾನೆನ್ನಲಾಗಿದೆ.
ಪ್ರಾಥಮಿಕ ಪರೀಕ್ಷೆಯಲ್ಲಿ ಇದು ಆಂಫೆಟಮೈನ್ ಅಥವಾ ಮೆಥಾಂಫೆಟಮೈನ್ ಮಾದರಿಯ ಮಾದಕ ವಸ್ತುವೆಂದು ಶಂಕಿಸಲಾಗಿದೆ.
ಕೂಡಲೇ ಮಾದಕ ವಸ್ತುವಿನೊಂದಿಗೆ ಈತನನ್ನು ಬಂಧಿಸಿ, ಎರಡು ಮೊಬೈಲ್, 1,870 ರೂ. ನಗದು, ಡೆಬಿಟ್ ಕಾರ್ಡ್, ಪರ್ಸ್, ಎಂಟು ಖಾಲಿ ಚಿಪ್‌ಲಾಕ್ ಕವರ್‌ಗಳು, ತೂಕದ ಯಂತ್ರ ಹಾಗೂ ಆಕ್ಟಿವಾ ಸ್ಕೂಟರ್‌ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಸೊತ್ತುಗಳ ಒಟ್ಟು ಮೌಲ್ಯ 1,93,610 ರೂ. ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.



