ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ನಟ, ದಿವಂಗತ ಧರ್ಮೇಂದ್ರ ಅವರ ಮೊದಲ ಪುಣ್ಯಸ್ಮರಣೆಯ ಅಂಗವಾಗಿ ಅವರ ಪತ್ನಿ, ನಟಿ ಹೇಮಾ ಮಾಲಿನಿ ಭಾವುಕ ನಮನ ಸಲ್ಲಿಸಿದ್ದಾರೆ. ಧರ್ಮೇಂದ್ರ ಅವರು ಅಗಲಿ ಒಂದು ವರ್ಷ ಕಳೆದಿದ್ದರೂ, ಅವರ ಅಗಲಿಕೆಯ ನೋವು ಇಂದಿಗೂ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
“ಅವರು ನನ್ನ ಸರ್ವಸ್ವ…”
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಧರ್ಮೇಂದ್ರ ಅವರೊಂದಿಗಿನ ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಹೇಮಾ ಮಾಲಿನಿ, “ಒಂದು ಇಡೀ ವರ್ಷ ಕಳೆದುಹೋಗಿದೆ, ಆದರೆ ನನ್ನ ದುಃಖದ ಮಾತ್ರ ಕಡಿಮೆಯಾಗಿಲ್ಲ. ಅವರು ಕೇವಲ ನನ್ನ ಪತಿಯಾಗಿರಲಿಲ್ಲ, ನನ್ನ ಸರ್ವಸ್ವ, ನನ್ನ ಸ್ನೇಹಿತ ಮತ್ತು ಮಾರ್ಗದರ್ಶಕರಾಗಿದ್ದರು. ನನ್ನ ಜೀವನದ ಬೆನ್ನೆಲುಬು ಮತ್ತು ನನ್ನ ಅಸ್ತಿತ್ವವೇ ಆಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಅವರಿಲ್ಲದೆ ಜೀವನ ತುಂಬಾ ಶೂನ್ಯ ಎನಿಸುತ್ತಿದೆ” ಎಂದು ಹೇಮಾ ಮಾಲಿನಿ ನೋವು ತೋಡಿಕೊಂಡಿದ್ದಾರೆ.
ಸಾಧನೆಯ ಶಿಖರಕ್ಕೇರಿದರೂ ಸರಳತೆ ಮರೆಯಲಿಲ್ಲ
ಧರ್ಮೇಂದ್ರ ಅವರ ವ್ಯಕ್ತಿತ್ವವನ್ನು ಸ್ಮರಿಸಿದ ಅವರು, “ಅವರದ್ದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದರೂ, ಅವರು ಎಂದಿಗೂ ತಮ್ಮ ಮೂಲವನ್ನು ಮರೆಯಲಿಲ್ಲ ಮತ್ತು ಸದಾ ಸರಳವಾಗಿಯೇ ಉಳಿದರು. ಅವರಲ್ಲಿದ್ದ ಸಹಜ ಒಳ್ಳೆಯತನ ಮತ್ತು ಪ್ರೀತಿ ಅವರನ್ನು ಬಲ್ಲ ಎಲ್ಲರನ್ನೂ ಸ್ಪರ್ಶಿಸಿತ್ತು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಭಗವದ್ಗೀತೆಯ ಸಾರ ಸ್ಮರಿಸಿದ ‘ಡ್ರೀಮ್ ಗರ್ಲ್’
ಜೀವನ ಮತ್ತು ಸಾವಿನ ಸತ್ಯವನ್ನು ನೆನೆದಿರುವ ಹೇಮಾ ಮಾಲಿನಿ, “ಆತ್ಮಕ್ಕೆ ಸಾವಿಲ್ಲ, ಅದಕ್ಕೆ ಮರುಜನ್ಮವಿದೆ ಎಂದು ಭಗವದ್ಗೀತೆ ಹೇಳುತ್ತದೆ. ಈ ಸತ್ಯ ನನಗೆ ತಿಳಿದಿದೆ. ಆದರೂ ನಾನು ಇನ್ನೂ ಈ ಬದುಕಿನಲ್ಲಿದ್ದೇನೆ ಮತ್ತು ಅವರ ಪ್ರೀತಿಯ ಸಾನಿಧ್ಯವನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಭಾವುಕರಾಗಿದ್ದಾರೆ. ಇದೇ ವೇಳೆ, ಧರ್ಮೇಂದ್ರ ಅವರನ್ನು ಸ್ಮರಿಸಿ, ಪ್ರೀತಿಯ ಸಂದೇಶಗಳನ್ನು ಕಳುಹಿಸುತ್ತಿರುವ ಕೋಟ್ಯಂತರ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಬಾಲಿವುಡ್ನ ‘ಹೀ-ಮ್ಯಾನ್’ ಎಂದೇ ಖ್ಯಾತರಾಗಿದ್ದ ಧರ್ಮೇಂದ್ರ ಅವರು 2025ರ ನವೆಂಬರ್ 24ರಂದು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಆರು ದಶಕಗಳಿಗೂ ಹೆಚ್ಚು ಕಾಲದ ಸಿನಿಪಯಣದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು, ‘ಶೋಲೆ’, ‘ಸೀತಾ ಔರ್ ಗೀತಾ’, ‘ಚುಪ್ಕೆ ಚುಪ್ಕೆ’ ಮುಂತಾದ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಹೇಮಾ ಮಾಲಿನಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. 1980ರ ಮೇ 2ರಂದು ವಿವಾಹವಾಗಿದ್ದ ಈ ದಂಪತಿಗೆ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಪುತ್ರಿಯರಿದ್ದಾರೆ.



