ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ತಿರುಪ್ಪರಂಕುಂದ್ರಂ ‘ದೀಪಸ್ತಂಭ’ ವಿವಾದ ತಾರಕಕ್ಕೇರಿದ್ದು, ದೀಪ ಹಚ್ಚುವುದರ ವಿರುದ್ಧ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಡೆಯಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
10 ಸಾವಿರ ಪೊಲೀಸರ ನಿಯೋಜನೆ ಆರೋಪ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರನ್, “ತಿರುಪ್ಪರಂಕುಂದ್ರಂನಲ್ಲಿ ದೀಪ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ, ತಮಿಳುನಾಡು ಮುಖ್ಯಮಂತ್ರಿಗಳು ಇದರ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಕನಿಷ್ಠ 10,000 ಪೊಲೀಸರನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಈ ರೀತಿ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಕಾರ್ತಿಕ ದೀಪೋತ್ಸವಕ್ಕಾಗಿ ತಿರುಪ್ಪರಂಕುಂದ್ರಂಗೆ ತೆರಳುತ್ತಿದ್ದ ತಮ್ಮನ್ನು ತಿರುನೆಲ್ವೇಲಿಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದ್ದು, ಇದು ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಸಿಗುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಮತ್ತೊಂದೆಡೆ, ಪೂಜೆ ಸಲ್ಲಿಸಲು ಯಾವುದೇ ಭಕ್ತರನ್ನು ತಡೆದಿಲ್ಲ ಎಂದು ಆಡಳಿತಾರೂಢ ಟಿವಿಕೆ ಸರ್ಕಾರ ಸ್ಪಷ್ಟಪಡಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ 258 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.
ಮದ್ರಾಸ್ ಹೈಕೋರ್ಟ್‌ನಿಂದ ಮಹತ್ವದ ಆದೇಶ
ಈ ಪ್ರಕರಣ ಮಂಗಳವಾರ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಇಂದು ಸಂಜೆಯೇ ತಿರುಪ್ಪರಂಕುಂದ್ರಂ ದೀಪಸ್ತಂಭದಲ್ಲಿ ಸಾಂಪ್ರದಾಯಿಕ ದೀಪ ಹಚ್ಚುವ ಕುರಿತ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವಂತೆ ಮಧುರೈ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ನಿಷೇಧಾಜ್ಞೆ ಅಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ:
ವಿವಾದದ ಹಿನ್ನೆಲೆ ಏನು?
ದರ್ಗಾಕ್ಕೆ ಸಮೀಪವಿರುವ ಕಾರಣ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಸ್ಥಳೀಯ ಆಡಳಿತವು ಬೆಟ್ಟದ ಮೇಲಿನ ದೀಪಸ್ತಂಭದಲ್ಲಿ ದೀಪ ಹಚ್ಚಲು ಅನುಮತಿ ನಿರಾಕರಿಸಿತ್ತು. ದೀಪಸ್ತಂಭವು ದರ್ಗಾದಿಂದ 50 ಮೀಟರ್‌ಗಿಂತ ಹೆಚ್ಚು ದೂರದಲ್ಲಿದೆ ಎಂದು ಗಮನಿಸಿದ ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠವು 2025ರ ಡಿಸೆಂಬರ್‌ನಲ್ಲಿ ದೀಪ ಹಚ್ಚಲು ಅನುಮತಿ ನೀಡಿತ್ತು. 2026ರ ಜನವರಿ 6ರಂದು ವಿಭಾಗೀಯ ಪೀಠವೂ ಈ ಆದೇಶವನ್ನು ಎತ್ತಿಹಿಡಿದಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 2026ರ ನವೆಂಬರ್ 20ರಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಪೀಠವು ನವೆಂಬರ್ 24ರಂದು ಒಂದು ಬಾರಿಗೆ ಮಾತ್ರ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೀಪ ಹಚ್ಚಲು ಅನುಮತಿ ನೀಡಿತ್ತು. ಇದಕ್ಕೆ ತಡೆಯಾಜ್ಞೆ ಕೋರಿ ತಮಿಳುನಾಡು ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು.



