ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಖಂಡಿಸಿ ಸಿಜೆಪಿ ಹಮ್ಮಿಕೊಂಡಿರುವ ‘ಜಂತರ್ ಮಂತರ್ 2.0’ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.
ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಸಿಜೆಪಿ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದು, ಶನಿವಾರ ಕನಾಟ್ ಪ್ಲೇಸ್‌ನ ಜನಪಥ್ ಬಳಿ ಮುನ್ನುಗ್ಗಲು ಯತ್ನಿಸಿದ ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಭದ್ರತೆಯ ದೃಷ್ಟಿಯಿಂದ ನಗರದ 48ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ.
ದೆಹಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಜುಲೈ 20ರಂದು ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಇಡೀ ದೆಹಲಿಯಾದ್ಯಂತ 35 ಸಾವಿರಕ್ಕೂ ಹೆಚ್ಚು ದೆಹಲಿ ಪೊಲೀಸ್ ಮತ್ತುಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಗೃಹ ಇಲಾಖೆಯ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳಿಗೂ ಹೈ ಅಲರ್ಟ್ ಕಾಯ್ದುಕೊಳ್ಳಲು ಸೂಚಿಸಿದ್ದಾರೆ.
ಕತ್ತಲಲ್ಲೂ ಕೆಲಸ ಮಾಡುವ ‘ಬಾಡಿ ಕ್ಯಾಮೆರಾ’ ಅಸ್ತ್ರ
ಪೊಲೀಸರ ವಿರುದ್ಧ ಸುಳ್ಳು ದೂರುಗಳು ಮತ್ತು ವಿಡಿಯೋಗಳನ್ನು ಹರಡುವುದಕ್ಕೆ ಬ್ರೇಕ್ ಹಾಕಲು ನಿಯೋಜಿತ ಸಿಬ್ಬಂದಿಗಳ ಯೂನಿಫಾರ್ಮ್ ಮೇಲೆ ಅತ್ಯಾಧುನಿಕ ಬಾಡಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಕತ್ತಲಲ್ಲೂ ಸ್ಪಷ್ಟವಾಗಿ ರೆಕಾರ್ಡ್ ಮಾಡಬಲ್ಲವು. ಪೊಲೀಸರ ಮೇಲೆ ಹಲ್ಲೆ ನಡೆಸಿ, ನಂತರ ಪೊಲೀಸರೇ ದೌರ್ಜನ್ಯ ಎಸಗಿದ್ದಾರೆ ಎಂದು ಸುಳ್ಳು ಆರೋಪ ಹೊರಿಸುವವರ ಅಸಲಿ ಮುಖವನ್ನು ಇವು ಬಯಲು ಮಾಡಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇವಲ ಲಾಠಿ ಚಾರ್ಜ್‌ಗೆ ಅನುಮತಿ
ಪ್ರತಿಭಟನೆಯ ತೀವ್ರತೆ ಹಿನ್ನೆಲೆಯಲ್ಲಿ ಅರೆಸೇನಾ ಪಡೆಗಳಿಗೆ ಯಾವುದೇ ಮಾರಕ ಶಸ್ತ್ರಾಸ್ತ್ರಗಳನ್ನು ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಆದರೆ, ಕಾನೂನು ಕೈಗೆತ್ತಿಕೊಳ್ಳುವವರನ್ನು ಚದುರಿಸಲು ಪೊಲೀಸರಿಗೆ ಲಾಠಿ ಮತ್ತು ಬ್ಯಾಟನ್ ಬಳಸಲು ಮುಕ್ತ ಅಧಿಕಾರ ನೀಡಲಾಗಿದೆ.
6 ಕ್ರೀಡಾಂಗಣಗಳು ತಾತ್ಕಾಲಿಕ ಜೈಲುಗಳಾಗಿ ಮಾರ್ಪಾಡು
ಪ್ರತಿಭಟನಾಕಾರರನ್ನು ಬಂಧಿಸಲು 6 ಪ್ರಮುಖ ತಾತ್ಕಾಲಿಕ ಬಂಧನ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಛತ್ರಸಾಲ್ ಸ್ಟೇಡಿಯಂ, ರಾಜೀವ್ ಗಾಂಧಿ ಸ್ಟೇಡಿಯಂ, ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸೂರಜ್‌ಮಲ್ ಸ್ಟೇಡಿಯಂ ಹಾಗೂ ದೌಲತ್‌ಪುರ ಮತ್ತು ಪಾಂಡ್ರಾವಲ್‌ನ ಕಮ್ಯುನಿಟಿ ಸೆಂಟರ್‌ಗಳು ಸೇರಿವೆ.
ಇಡೀ ಸೆಂಟ್ರಲ್ ದೆಹಲಿ ವಲಯದಲ್ಲಿ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ ತಂತ್ರಜ್ಞಾನ, ಡ್ರೋನ್‌ಗಳು, ಹೆಚ್ಚುವರಿ ಸಿಸಿಟಿವಿಗಳು ಹಾಗೂ ಕಟ್ಟಡಗಳ ಮೇಲ್ಛಾವಣಿಯ ಮೇಲೆ ನಿಂತು ನಿಗಾ ಇಡುವ ರೂಫ್‌ಟಾಪ್ ಸ್ಪಾಟರ್‌ಗಳನ್ನು ನಿಯೋಜಿಸಲಾಗಿದೆ. ಮಹಿಳಾ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಉತ್ತರ ಪ್ರದೇಶ ಹಾಗೂ ಹರಿಯಾಣದಿಂದ ಹೆಚ್ಚುವರಿ ಮಹಿಳಾ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.
ವಿರೋಧ ಪಕ್ಷಗಳಾದ ‘ಇಂಡಿಯಾ’ ಒಕ್ಕೂಟದ ಸಂಸದರು ರಾಷ್ಟ್ರಪತಿಗಳನ್ನು ಭೇಟಿಯಾಗಿ ದೂರು ನೀಡಿದ ಬೆನ್ನಲ್ಲೇ, ದೆಹಲಿಯ ಬೀದಿಗಳಲ್ಲಿ ಸಿಜೆಪಿ ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಮ್ಮಿಕೊಂಡಿರುವ ಈ ಪ್ರತಿಭಟನೆಯು ಇಡೀ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.



