ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಸಿನಿಮಾದ ಹಾಡುಗಳು ತುಂಬಾನೇ ವಿಭಿನ್ನವಾಗಿವೆ. ದೇಶ ವಿದೇಶಗಳಲ್ಲಿಯೂ ಈ ಸಿನಿಮಾದ ಹಾಡುಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಪ್ರತಿಷ್ಠಿತ 69ನೇ ಗ್ರ್ಯಾಮಿ ಪ್ರಶಸ್ತಿ ರೇಸ್‌ನಲ್ಲಿ ಬರೋಬ್ಬರಿ ಒಂಭತ್ತು ವಿಭಾಗಗಳಲ್ಲಿ ಈ ಸಿನಿಮಾದ ಹಾಡುಗಳನ್ನು ಸಲ್ಲಿಕೆ ಮಾಡಲಾಗಿದೆ. ಟಿ-ಸೀರೀಸ್ ಮತ್ತು ಬಿ62 ಸ್ಟುಡಿಯೋಸ್ ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಭಾರತೀಯ ಚಿತ್ರರಂಗಕ್ಕೆ ಇದು ಹೆಮ್ಮೆಯ ಕ್ಷಣವಾಗಿದೆ.
ಗ್ರ್ಯಾಮಿ ಪ್ರಶಸ್ತಿಗಾಗಿ ಕೇವಲ ಒಂದೆರಡು ಹಾಡುಗಳಲ್ಲ, ಇಡೀ ಆಲ್ಬಮ್ ಅನ್ನು ಅತ್ಯುತ್ತಮ ಕಾಂಪೈಲೇಶನ್ ಸೌಂಡ್‌ಟ್ರ್ಯಾಕ್ ವಿಭಾಗದ ನಾಮಿನೇಷನ್ಗೆ ಪರಿಗಣನೆ ಮಾಡಬೇಕು ಎಂದು ಕೋರಲಾಗಿದೆ. ಆರಿ ಆರಿ, ಫಿರ್ ಸೆ ನೇನಾ ಭರೇ, ಜಾನ್ ಸೆ ಗುಝರ್ತೆ ಹೇ, ಜೇಸೆ ಸಜನಾ ಹಾಡುಗಳು ಬೇರೆ ಬೇರೆ ವಿಭಾಗದಲ್ಲಿ ಸ್ಪರ್ಧಿಸುತ್ತಿವೆ. ಇನ್ನು ಏಷ್ಯನ್ ಪಾಪ್ ಮ್ಯೂಸಿಕ್ ವಿಭಾಗದಲ್ಲಿಯೂ ಈ ಸಿನಿಮಾದ ಹಾಡುಗಳು ವಿಶೇಷ ಸ್ಥಾನ ಪಡೆದಿವೆ.
ಹಾಗೆ ನೋಡಿದರೆ, ಗ್ರಾಮಿ ಪ್ರಶಸ್ತಿಗೆ ಹಾಡುಗಳು ಸಲ್ಲಿಕೆಯಾಗಿರುವುದು ಅಂದರೆ ಅವು ಇನ್ನೂ ಅಧಿಕೃತವಾಗಿ ನಾಮಿನೇಟ್ ಆಗಿವೆ ಎಂದರ್ಥವಲ್ಲ. ರೆಕಾರ್ಡಿಂಗ್ ಅಕಾಡೆಮಿಯ ಕಠಿಣ ಅರ್ಹತಾ ಮಾನದಂಡಗಳು ಮತ್ತು ಬಹು ಹಂತದ ವೋಟಿಂಗ್ ಪ್ರಕ್ರಿಯೆಯ ಮೂಲಕ ಹಾಡುಗಳು ಸಾಗಬೇಕು. ಇದರ ನಂತರವೇ ಅಂತಿಮ ನಾಮಿನೇಷನ್ ಪಟ್ಟಿಯನ್ನು ಅಕಾಡೆಮಿ ಪ್ರಕಟಿಸಲಿದೆ.ಈ ಜಾಗತಿಕ ಮ್ಯೂಸಿಕ್ ಕ್ಯಾಂಪೇನ್ ಹಾಗೂ ನಾಮಿನೇಷನ್ ಪ್ರಯತ್ನವು ಚಿತ್ರದ ಯಶಸ್ಸಿಗೆ ಮತ್ತೊಂದು ಗರಿಮೆ ತಂದುಕೊಟ್ಟಿದೆ. ‘ಧುರಂಧರ್’ ಹಾಗೂ ‘ಧುರಂಧರ್ 2’ ಈಗಾಗಲೇ ಜಾಗತಿಕ ಮಟ್ಟದಲ್ಲಿ ಮೂರು ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿಕೊಳ್ಳುವ ಮೂಲಕ ದೊಡ್ಡ ಇತಿಹಾಸ ನಿರ್ಮಿಸಿದೆ.



