ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಅದ್ಧೂರಿ ಉದ್ಘಾಟನೆಗೆ ಕೌಂಟ್‌ಡೌನ್ ಆರಂಭವಾಗಿದೆ. ಚಾಮುಂಡಿ ಬೆಟ್ಟದಲ್ಲೂ ಸಕಲ ಸಿದ್ಧತೆಗಳೂ ಅಂತಿಮ ಹಂತಕ್ಕೆ ತಲುಪಿದ್ದು, ನಾಳೆ ಮುಂಜಾನೆ ನಿಗದಿಯಾಗಿರುವ ಶುಭ ಮುಹೂರ್ತದಲ್ಲಿ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ.
ಮತ್ತೊಂದೆಡೆ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಚಾಮುಂಡಿ ಬೆಟ್ಟದ ಮೇಲಿರುವ ಪ್ರಸಿದ್ಧ ಮಹಿಷಾಸುರ ಪ್ರತಿಮೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಹಿಷ ದಸರಾ ನಿಷೇಧ, ಬೆಟ್ಟದ ಮೇಲೆ ಬಿಗಿ ಕಾವಲು
ಚಾಮುಂಡಿ ಬೆಟ್ಟದ ಆವರಣದಲ್ಲಿ ವಿವಾದಾತ್ಮಕ ‘ಮಹಿಷ ದಸರಾ’ ಆಚರಣೆಗೆ ಮೈಸೂರು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಹಿಷಾಸುರ ವಿಗ್ರಹದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಪ್ರಕಟಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರನ್ನು ಕಾವಲಿಗಿರಿಸಲಾಗಿದೆ.
ತಾಯಿಯ ಉತ್ಸವ ಮೂರ್ತಿ ಶುದ್ಧಿ
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಚಾಮುಂಡೇಶ್ವರಿ ತಾಯಿಯ ಪವಿತ್ರ ಉತ್ಸವ ಮೂರ್ತಿಯ ಶುದ್ಧೀಕರಣ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಭಕ್ತಿಭಾವದಿಂದ ನೆರವೇರಿಸಲಾಗಿದೆ. ಮೈಸೂರು ಅರಮನೆಯಿಂದ ತರಲಾಗಿರುವ ಶಕ್ತಿ ದೇವತೆಯ ಮಹಿಷಮರ್ದಿನಿ ಅವತಾರದ ಉತ್ಸವ ಮೂರ್ತಿಗೆ ನವರಾತ್ರಿಯ ಒಂಬತ್ತೂ ದಿನಗಳ ಕಾಲ ಪ್ರತಿದಿನ ಶಾಸ್ತ್ರೋಕ್ತವಾಗಿ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ, ವಿಶೇಷ ಅಲಂಕಾರ ಪೂಜೆಗಳನ್ನು ಸಲ್ಲಿಸಲಾಗುತ್ತದೆ.
ಇದನ್ನೂ ಓದಿ:
100ಕ್ಕೂ ಹೆಚ್ಚು ಧರ್ಮಗುರುಗಳ ಭಾಗಿ
ನಾಳೆ ಬೆಳಗ್ಗೆ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯಲ್ಲಿ ದಸರಾ ಉದ್ಘಾಟಕರು, ಮುಖ್ಯಮಂತ್ರಿಗಳು, ಸಚಿವರು ಹಾಗೂ ಹಿರಿಯ ರಾಜಕಾರಣಿಗಳ ಸಮ್ಮುಖದಲ್ಲಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಬ್ಬ ಉದ್ಘಾಟನೆಗೊಳ್ಳಲಿದೆ. ಈ ಬಾರಿಯ ದಸರಾದ ವಿಶೇಷ ಆಕರ್ಷಣೆಯಾಗಿ ವಿವಿಧ ಧರ್ಮಗಳ 100ಕ್ಕೂ ಹೆಚ್ಚು ಪೂಜ್ಯ ಧರ್ಮಗುರುಗಳು ಪಾಲ್ಗೊಳ್ಳುತ್ತಿದ್ದು, ಅವರಿಗಾಗಿ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ.



