ಹೊಸದಿಗಂತ ವರದಿ ಬೆಂಗಳೂರು:
ಉತ್ತರ ಕನ್ನಡ ಜಿಲ್ಲೆ ನಮಗೆ ಕೇವಲ ಭೂಭಾಗವಲ್ಲ, ಅದು ನಮ್ಮ ತಾಯಿ. ಅಭಿವೃದ್ಧಿಯ ಹೆಸರಿನಲ್ಲಿ ಕಾಡು, ನದಿಗಳನ್ನು ಧ್ವಂಸಗೊಳಿಸಿ ನಮ್ಮ ಹೆತ್ತ ತಾಯಿಯನ್ನೇ ಕೊಲ್ಲುವ ಕೃತ್ಯಕ್ಕೆ ಕೈಹಾಕಬೇಡಿ” ಎಂದು ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಹೇಳಿದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ʼಪಶ್ಚಿಮ ಘಟ್ಟ ಉಳಿಸಿ ಉತ್ತರಕನ್ನಡ ಜಿಲ್ಲೆ ಉಳಿಸಿʼ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಜನಾಂದೋಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಮಾರು 50 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಗೆ ಶಿಶುವಾಗಿ ಕಾಲಿಟ್ಟಿದ್ದೆ. ಇಲ್ಲಿನ ಮನೆ-ಮನೆಗಳಲ್ಲಿ ಊಟ ಮಾಡಿದ್ದೇನೆ. ಅಪಾರವಾದ ಪ್ರೀತಿ ಹಾಗೂ ಆತಿಥ್ಯವನ್ನು ಈ ನೆಲದ ಜನರಿಂದ ಪಡೆದಿದ್ದೇನೆ. ಈ ಜಿಲ್ಲೆಯ ಹಸಿರು ಮತ್ತು ಸಂಸ್ಕೃತಿ ಜಗತ್ತಿನಲ್ಲೇ ಅಪರೂಪದ್ದು. ಇಂತಹ ದೈವಿಕ ಪರಿಸರ ಇಂದು ಸಂಕಷ್ಟದಲ್ಲಿದೆ ಎಂದರು.
ಹಿಮಾಲಯಕ್ಕಿಂತ ಪ್ರಾಚೀನವಾದ ಪಶ್ಚಿಮಘಟ್ಟ
“ಹಿಮಾಲಯಕ್ಕೂ ಮೊದಲೇ ಹುಟ್ಟಿದ ಪ್ರಾಚೀನ ಪರ್ವತ ಶ್ರೇಣಿ ಈ ಪಶ್ಚಿಮಘಟ್ಟ. ಇದು ಈ ದೇಶದ ಜೀವನಾಡಿ. ಕಳೆದ 50-55 ವರ್ಷಗಳಿಂದ ಈ ಕಾಡುಗಳಿಗಾಗಿ, ನದಿಗಳಿಗಾಗಿ, ಕಣಿವೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಬರಲಾಗಿದೆ. ಆದರೂ ಎಗ್ಗಿಲ್ಲದೆ ಪರಿಸರವನ್ನು ನಾಶಮಾಡಲು ಯೋಜನೆಗಳನ್ನು ತರಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಅಮೆರಿಕದ ಉದಾಹರಣೆ – ಅಣೆಕಟ್ಟುಗಳ ತೆರವು
ಅಭಿವೃದ್ಧಿ ಹೊಂದಿದ ಅಮೆರಿಕದಂತಹ ದೇಶಗಳಲ್ಲಿ ಜಲಾಶಯಗಳು ಪರಿಸರಕ್ಕೆ ಮಾರಕವೆಂದು ತಿಳಿದು, ಅಲ್ಲಿನ ನದಿಗಳ ಮೇಲಿನ ಡ್ಯಾಮ್‌ಗಳನ್ನು ತೆರವು ಮಾಡಿ ನದಿಗಳಿಗೆ ಮರುಜೀವ ನೀಡುತ್ತಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಸದಾ ನದಿಗಳ ಮೇಲೆ ಅಣೆಕಟ್ಟುಗಳನ್ನು ಕಟ್ಟಿ, ಸುರಂಗಗಳನ್ನು ಕೊರೆದು, ಕಾಲಿ ನದಿಯನ್ನು ಬರಿದು ಮಾಡಿ ವಿದ್ಯುತ್ ಉತ್ಪಾದನೆಗೆ ಮುಂದಾಗುತ್ತಿದ್ದಾರೆ. ಈ ಮೂಲಕ ನದಿಯನ್ನೇ ಕೊಲ್ಲುವ ದುಸ್ಸಾಹಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲಿಡಲು ಬಿಡುವುದಿಲ್ಲ
ಪಶ್ಚಿಮಘಟ್ಟದ ಒಡಲಲ್ಲಿ ವಿನಾಶಕಾರಿ ಯೋಜನೆಗಳನ್ನು ರೂಪಿಸಿ ಕಾಲಿ ನದಿಗೆ ಅಡ್ಡಲಾಗಿ ಇನ್ನಷ್ಟು ಘಾಸಿ ಮಾಡಲು ಯತ್ನಿಸಲಾಗುತ್ತಿದೆ. ಇಂತಹ ಯೋಜನೆಗಳು ಜಿಲ್ಲೆಯ ಜೀವವೈವಿಧ್ಯಕ್ಕೆ ಮತ್ತು ಜನರ ಬದುಕಿಗೆ ಮಾರಕ. ಈ ಯಾವುದೇ ವಿನಾಶಕಾರಿ ಯೋಜನೆಗೆ ನಾವು ಇಲ್ಲಿ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ನದಿಗಳು, ಕಾಡುಗಳು ಕೇವಲ ಸಂಪನ್ಮೂಲಗಳಲ್ಲ, ಅವು ನಮ್ಮ ಜೀವ ಉಳಿಸುವ ತಾಯಂದಿರು. ಅವುಗಳನ್ನು ಧ್ವಂಸ ಮಾಡುವ ಯೋಜನೆಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಅವರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.



