October 11, 2026
Sunday, October 11, 2026
spot_img

ಚೆನ್ನೈ ಮೆಟ್ರೋ ಫೇಸ್-2 ಮಾರ್ಗ ಲೋಕಾರ್ಪಣೆ: ಸಿಎಂ ವಿಜಯ್ ಜೊತೆ ಮೆಟ್ರೋದಲ್ಲಿ ಸಂಚರಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ಸಾರಿಗೆ, ಕೈಗಾರಿಕೆ ಹಾಗೂ ತಂತ್ರಜ್ಞಾನ ವಲಯದಲ್ಲಿ ಇಂದು ಹೊಸ ಕ್ರಾಂತಿ ಸೃಷ್ಟಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸಮ್ಮುಖದಲ್ಲಿ 4,900 ಕೋಟಿ ವೆಚ್ಚದ ಚೆನ್ನೈ ಮೆಟ್ರೋ ರೈಲು ಯೋಜನೆಯ ಫೇಸ್-2 ರ ಪೂನಮಲ್ಲಿ-ವಡಪಳನಿ ಮಾರ್ಗವನ್ನು ಉದ್ಘಾಟಿಸಿದ್ದಾರೆ.

ಈ ಅದ್ಧೂರಿ ಲೋಕಾರ್ಪಣೆಯ ನಂತರ ಪ್ರಧಾನಿಯವರು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಪೊರೂರ್ ಬೈಪಾಸ್ ನಿಲ್ದಾಣದಿಂದ ಪೂನಮಲ್ಲಿ ಬೈಪಾಸ್ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಜಂಟಿಯಾಗಿ ಪ್ರಯಾಣ ನಡೆಸಿದರು.

3,700 ಕೋಟಿ ಮೊತ್ತದ ಹೆದ್ದಾರಿ ಕ್ರಾಂತಿ


ರಾಜ್ಯದ ರಸ್ತೆ ಸಂಪರ್ಕವನ್ನು ಬಲಪಡಿಸಲು ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರಧಾನಿ ಮೋದಿ ಅವರು ಬೃಹತ್ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದರಲ್ಲಿ NH-744 ರ 36 ಕಿಲೋಮೀಟರ್ ಉದ್ದದ ವಡುಗಪಟ್ಟಿ-ತೆರ್ಕುವೆಂಗನಲ್ಲೂರು ಚತುಷ್ಪಥ ರಸ್ತೆ ಹಾಗೂ ಮಧುರೈ ನಗರದ ದಟ್ಟಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಿರುವ 30 ಕಿಲೋಮೀಟರ್ ಉದ್ದದ ಮಧುರೈ ರಿಂಗ್ ರೋಡ್ (NH-744A) ಪ್ರಮುಖವಾಗಿವೆ. ಇದರ ಜೊತೆಗೆ NH-83 ರ ಅಡಿಯಲ್ಲಿ ನಿರ್ಮಾಣವಾಗಲಿರುವ 4 ಪಥದ ತಿರುವಾರೂರು ಬೈಪಾಸ್ ರಸ್ತೆ ಕಾಮಗಾರಿಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

750 ಕೋಟಿಗೂ ಅಧಿಕ ರೈಲ್ವೆ ಯೋಜನೆಗಳ ಉಡುಗೊರೆ

ತಮಿಳುನಾಡಿನ ರೈಲ್ವೆ ಸಂಪರ್ಕವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಧಾನಿಯವರು ಇಂದಿನಿಂದ ಕಾರೈಕಲ್-ಪೆರಾಲಂ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಕೊಯಮತ್ತೂರು ಹಾಗೂ ಅದರ ಸುತ್ತಮುತ್ತಲಿನ ವಲಯಗಳಲ್ಲಿ 3 ಪ್ರಮುಖ ರೈಲ್ವೆ ಫ್ಲೈಓವರ್‌ಗಳನ್ನು ಉದ್ಘಾಟಿಸಲಾಗಿದ್ದು, ಇದು ನಗರದ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿದೆ. ಇದೇ ವೇಳೆ ಅಮೃತ್ ಭಾರತ ಯೋಜನೆಯಡಿ ಅತ್ಯಾಧುನಿಕವಾಗಿ ನವೀಕರಿಸಲಾದ ಪಳನಿ, ವೆಲ್ಲೂರು ಕಂಟೋನ್ಮೆಂಟ್, ಅಂಬಾಸಮುದ್ರಂ, ಪರಮಕುಡಿ ಮತ್ತು ನಾಮಕ್ಕಲ್‌ನ 5 ರೈಲು ನಿಲ್ದಾಣಗಳನ್ನು ಪ್ರಧಾನಿ ಉದ್ಘಾಟಿಸಿದ್ದಾರೆ.

ಬಂದರುಗಳ ಅಭಿವೃದ್ಧಿ

ಚೆನ್ನೈ ಬಂದರಿನಲ್ಲಿ ಸುಧಾರಿತ ಕ್ರೂಸ್ ಟರ್ಮಿನಲ್ ಹಾಗೂ ಗೋದಾಮುಗಳು ಸೇರಿದಂತೆ 4 ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ವಿ.ಓ. ಚಿದಂಬರನಾರ್ ಬಂದರಿನಲ್ಲಿ ಹಸಿರು ಇಂಧನ ಪರಿವರ್ತನೆಗೆ ಸಂಬಂಧಿಸಿದ 8 ದೊಡ್ಡ ಯೋಜನೆಗಳಿಗೆ ಅಡಿಗಲ್ಲು ಹಾಕಲಾಗಿದೆ. ಇದಲ್ಲದೆ ಕಾಮರಾಜರ್ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ ಹಂತ-1 ಮತ್ತು ಹಂತ-2 ರ ಬೃಹತ್ ಕ್ಯಾಪಿಟಲ್ ಡ್ರೆಜ್ಜಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದೇ ವೇಳೆ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (CPCL) ನ ಮನಾಲಿ ರಿಫೈನರಿಯಲ್ಲಿ ಪ್ರೀಮಿಯಂ ಗುಣಮಟ್ಟದ ಲ್ಯೂಬ್ರಿಕಂಟ್‌ಗಳನ್ನು ತಯಾರಿಸಲು ಬೇಕಾದ Rs 1,620 ಕೋಟಿ ವೆಚ್ಚದ ‘ಲೂಬ್ ಆಯಿಲ್ ಬೇಸ್ ಸ್ಟಾಕ್ಸ್’ (LOBS) ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಇದನ್ನೂ ಓದಿ:

SGBC ಮಹತ್ವದ ಸಾಧನೆ

ಮೂಲಸೌಕರ್ಯಗಳ ಜೊತೆಗೆ ವೈಜ್ಞಾನಿಕ ವಲಯದಲ್ಲೂ ಭಾರತ ಇತಿಹಾಸ ಬರೆದಿದ್ದು, ಪ್ರಧಾನಿಯವರು ಐಐಟಿ ಮದ್ರಾಸ್‌ನ ‘ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್’ (SGBC) ಅನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಮಾನವನ ಭ್ರೂಣದ ಹಂತದಿಂದ ಹಿಡಿದು ವೃದ್ಧಾಪ್ಯದವರೆಗಿನ 100 ಕ್ಕೂ ಹೆಚ್ಚು ಮಿದುಳುಗಳನ್ನು ಕೋಶ ಮಟ್ಟದ 3D ನಕ್ಷೆಯಾಗಿ ಪರಿವರ್ತಿಸುವ ಜಾಗತಿಕ ಸಂಶೋಧನಾ ಮಿಷನ್ ಅನ್ನು ಅವರು ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ಪಾರ್ಶ್ವವಾಯು ಅಧ್ಯಯನಕ್ಕೆ ನೆರವಾಗುವ ವಿಶಿಷ್ಟ ‘C-STROKE’ ಅಟ್ಲಾಸ್ ಅನ್ನು ಬಿಡುಗಡೆ ಮಾಡಿದ್ದಾರೆ.

 ಕೊನೆಯದಾಗಿ, ಚೆನ್ನೈನ ಪ್ರಸಿದ್ಧ ಜೈಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಶಾಲೆಯ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಿ ಯುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Must Read