ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಸಲು ಮುಂದಾಗಿದ್ದ ಪ್ರತಿಭಟನೆಗೂ ಮುನ್ನ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖ ನಾಯಕರು ಇದೀಗ ಬಿಡುಗಡೆಗೊಂಡಿದ್ದಾರೆ.
ದೆಹಲಿ ಕ್ಯಾಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ತುರ್ತು ವಿಚಾರಣೆಯಲ್ಲಿ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಿಜೆಪಿ ನಾಯಕರಾದ ಅಭಿಜೀತ್ ದಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ತಕ್ಷಣವೇ ಬಂಧನದಿಂದ ಮುಕ್ತಗೊಳಿಸುವಂತೆ ಆದೇಶಿಸಿದೆ.
ಆದಾಗ್ಯೂ, ಮುಂದಿನ ಒಂದು ವರ್ಷದವರೆಗೆ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೆ ಶಾಂತಿ ಕಾಪಾಡಬೇಕು ಎಂಬ ಕಠಿಣ ಷರತ್ತನ್ನು ವಿಧಿಸಿ ಬಾಂಡ್ ಬರೆಸಿಕೊಳ್ಳಲಾಗಿದೆ.
ಏರ್‌ಪೋರ್ಟ್‌ನಲ್ಲೇ ನಡೆದಿತ್ತು ಹೈಡ್ರಾಮಾ
ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಖಂಡಿಸಿ ಶನಿವಾರ ಜಂತರ್ ಮಂತರ್ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂಬೈನಿಂದ ದೆಹಲಿಗೆ ಬಂದಿಳಿದಿದ್ದ ಅಭಿಜೀತ್ ದೀಪ್ಕೆ ಹಾಗೂ ಅವರ ಸಹಚರರನ್ನು ದೆಹಲಿ ಪೊಲೀಸರು ವಿಮಾನದ ಒಳಗೇ ನುಗ್ಗಿ ವಶಕ್ಕೆ ಪಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗಿತ್ತು. ತದನಂತರ ಇವರನ್ನು ದೆಹಲಿ ಕ್ಯಾಂಪ್‌ನ ಪೊಲೀಸ್ ಕಾವಲಿನಲ್ಲಿ ಇರಿಸಲಾಗಿತ್ತು.
ಕೋರ್ಟ್ ಕಲಾಪ
ಭಾನುವಾರ ಬೆಳಿಗ್ಗೆ ಈ ಮೂವರು ನಾಯಕರನ್ನು ದೆಹಲಿ ಕ್ಯಾಂಪ್ ಪೊಲೀಸ್ ಇಲಾಖೆಯ ವಿಶೇಷ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು. ಸಿಜೆಪಿ ಪರ ವಕೀಲರು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕಾಗಿದ್ದು, ಈ ಬಂಧನ ಕಾನೂನುಬಾಹಿರ ಎಂದು ವಾದಿಸಿದರು. ಉಭಯ ಪಕ್ಷಗಳ ವಾದ ಆಲಿಸಿದ ಮ್ಯಾಜಿಸ್ಟ್ರೇಟ್, ಯಾವುದೇ ಹಿಂಸಾಚಾರಕ್ಕೆ ಅವಕಾಶ ನೀಡದಂತೆ ಮುಂದಿನ ಒಂದು ವರ್ಷದ ಅವಧಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಡ್ಡಾಯ ಷರತ್ತಿನ ಮೇರೆಗೆ ಮೂವರ ಬಿಡುಗಡೆಗೆ ಆದೇಶ ನೀಡಿದ್ದಾರೆ.
ಬಿಡುಗಡೆಯ ಬೆನ್ನಲ್ಲೇ ಸಿಜೆಪಿ ತುರ್ತು ಸುದ್ದಿಗೋಷ್ಠಿ
ಪೊಲೀಸ್ ಬಂಧನದಿಂದ ಮುಕ್ತರಾಗುತ್ತಿದ್ದಂತೆಯೇ ಹೋರಾಟದ ಕಿಚ್ಚು ತಣ್ಣಗಾಗಿಲ್ಲ ಎಂದು ಸಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಪೊಲೀಸರ ದೌರ್ಜನ್ಯ, ತಮ್ಮನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದ ಕ್ರಮ ಹಾಗೂ ಚುನಾವಣಾ ಆಯೋಗದ ‘ವೋಟ್ ಚೋರಿ’ ಹಗರಣದ ಮುಂದಿನ ಹೋರಾಟದ ರೂಪರೇಷೆಗಳನ್ನು ಪ್ರಕಟಿಸಲು ಇಂದೇ ದೆಹಲಿಯಲ್ಲಿ ಸಿಜೆಪಿ ತುರ್ತು ಸುದ್ದಿಗೋಷ್ಠಿ ಕರೆದಿದೆ.
ಮತ್ತೊಂದೆಡೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಬಂಧನವನ್ನು ತೀವ್ರವಾಗಿ ಖಂಡಿಸಿದ್ದು, ಅಕ್ಟೋಬರ್ 12 ರ ಸೋಮವಾರದಂದು ಇಡೀ ‘ಇಂಡಿ ಒಕ್ಕೂಟ’ ದೆಹಲಿಯ ಬೀದಿಗಳಲ್ಲಿ ಬೃಹತ್ ಜಂಟಿ ಪ್ರತಿಭಟನೆ ನಡೆಸಲಿದೆ ಎಂದು ಸಾರಿದ್ದಾರೆ. ಹೀಗಾಗಿ ನಾಯಕರ ಬಿಡುಗಡೆಯಾಗಿದ್ದರೂ ರಾಜಧಾನಿಯಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ.



